ಬುಧವಾರ, ಏಪ್ರಿಲ್ 14, 2021
23 °C

ದೇವನಹಳ್ಳಿ ಸುತ್ತಮುತ್ತ ಮಳೆ,ಗಾಳಿ ಅಬ್ಬರ: ಉರುಳಿದ ಮರ, ತಗ್ಗು ಪ್ರದೇಶಕ್ಕೆ ನೀರು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ದೇವನಹಳ್ಳಿ ಸುತ್ತಮುತ್ತ ಶುಕ್ರವಾರ ಸಂಜೆ ಮಳೆಗಾಳಿ ಅಬ್ಬರದಲ್ಲಿ ಅನೇಕ ಮರಗಳು ಉರುಳಿ ಬಿದ್ದು ತಗ್ಗು ಪ್ರದೇಶದಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಹರಸಾಹಸ ಪಡುವಂತಾಯಿತು.

ರಾಷ್ಟ್ರೀಯ ಹೆದ್ದಾರಿ 7ರ ರಸ್ತೆಯಿಂದ ದೇವನಹಳ್ಳಿ ನಗರ ಪ್ರವೇಶ ಪಡೆಯುವ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು, ಮೂರರಿಂದ ನಾಲ್ಕು ಅಡಿಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಅನೇಕ ವಾಹನಗಳು ಚಾಲನೆ ಕಳೆದುಕೊಂಡು ಸಾರ್ವಜನಿಕರ ಸಹಕಾರದಲ್ಲಿ ತಳ್ಳುತ್ತಾ ಎತ್ತರ ಪ್ರದೇಶಕ್ಕೆ ಬಂದು ನಿಲ್ಲಿಸಲಾಗುತ್ತಿತ್ತು.

ಹರಿಯುತ್ತಿರುವ ನೀರಿನ ಅಬ್ಬರ ನೋಡಿದ ವಾಹನ ಚಾಲಕರು ಅರ್ಧ ತಾಸು ನೀರಿನ ಹರಿವು ಕಡಿಮೆಯಾದ ನಂತರ ವಾಹನಗಳನ್ನು ಚಾಲನೆ ಮಾಡಿಕೊಂಡು ಸಾಗಿದರು, ದ್ವಿಚಕ್ರ ವಾಹನ ಸವಾರರ ಪಾಡು ಹೇಳ ತೀರದಾಗಿತ್ತು, ಮತ್ತೊಂದೆಡೆ ಸೂಲಿಬೆಲೆ ರಸ್ತೆಯಲ್ಲಿನ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢ ಶಾಲೆ ಮುಂಭಾಗ, ಗ್ರಾಮಾಂತರ ಪ್ರೌಢ ಶಾಲೆಯ ಮುಂಭಾಗದ ರಸ್ತೆಯಲ್ಲಿ ನೀರು ತುಂಬಿ ಸಾರ್ವಜನಿಕರು ಪರದಾಡುವಂತಾಯಿತು.

ಪುಟ್ಟಪ್ಪನಗುಡಿ ಬೀದಿಯಲ್ಲಿ ಚರಂಡಿ ಕಿರಿದಾಗಿರುವುದು ಮತ್ತು ಚರಂಡಿಯಲ್ಲಿನ ತ್ಯಾಜ್ಯವನ್ನು ಸರಿಯಾಗಿ ಹೊರ ಹಾಕದ ಹಿನ್ನೆಲೆಯಲ್ಲಿ ಸುರಿದ ಮಳೆ ನೀರು ರಸ್ತೆಯಲ್ಲಿ ಹರಿದು ಬಡಾವಣೆ ನಿವಾಸಿಗರ ಮನೆಗಳಿಗೆ ನುಗ್ಗಿದೆ. ಅಲ್ಲದೆ ಸರ್ಕಾರಿ ಶಾಲೆಯ ಮುಂಭಾಗದ ರಸ್ತೆ ಸಂಪೂರ್ಣ ನೀರಿನಿಂದ ತುಂಬಿ ಪಾದಚಾರಿಗಳಿಗೆ ತೊಂದರೆಯಾಯಿತು.

ಎತ್ತರದಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಮಳೆ ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ರಸ್ತೆಯೋ ಚರಂಡಿಯೋ ಎಂಬುದು ನೋಡುತ್ತಿದ್ದವರಿಗೆ ಗೊಂದಲ ಮೂಡಿಸಿತ್ತು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ನಗರದ ಚಿಕ್ಕ ಸಿಹಿ ನೀರಿನ ಕೆರೆಗೆ ನೀರು ಹರಿದು ತುಂಬಿಕೊಂಡಿದೆ.

ತಾಲ್ಲೂಕಿನ ಕೊಯಿರಾ ಗ್ರಾಮದಲ್ಲಿ ನಾಗರಾಜಪ್ಪ ಅವರ ತೆಂಗಿನ ಮರ ಕೃಷ್ಣಪ್ಪ ಅವರ ಮನೆ ಮೇಲೆ ಉರುಳಿ ಬಿದ್ದಿದೆ. ಹನುಮಂತ ಗೌಡರ ಮನೆಯ ಶೀಟ್‌ಗಳು, ಸತೀಶಪ್ಪರ ಪಶುಪಾಲನೆ ಮನೆಯ ಶೀಟ್‌ಗಳು ಬೀಸಿದ ಗಾಳಿಗೆ ಹಾರಿ ಹೋಗಿವೆ. ಕೊಯಿರಾ ಮಾಯಸಂದ್ರ ಸಂಪರ್ಕ ರಸ್ತೆಗೆ ಮರವೊಂದು ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಶುಕ್ರವಾರ ಸಂಜೆ ಐದು ಗಂಟೆಗೆ ಕಡಿತಗೊಂಡ ವಿದ್ಯುತ್ ಶನಿವಾರ ಮಧ್ಯಾಹ್ನದವರೆಗೆ ಪೂರೈಕೆ ಇರಲಿಲ್ಲ, ಇಡೀ ರಾತ್ರಿ ನಗರ ಕತ್ತಲಲ್ಲಿ ಮುಳುಗಿತ್ತು, ಕೊಯಿರಾ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಕುಡಿಯುವ ನೀರಿಗಾಗಿ ತೀವ್ರ ತೊಂದರೆಯಾಗಿದೆ ಎಂದು ಗ್ರಾಮದ ಚಿಕ್ಕೇಗೌಡ ಮತ್ತು ಚಂದ್ರಶೇಖರ್ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು