ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ಭೂಸ್ವಾಧೀನಕ್ಕೆ ರೈತರ ವಿರೋಧ, ಅಹೋರಾತ್ರಿ ಧರಣಿ ಎಚ್ಚರಿಕೆ

60 ದಿನ ಪೂರೈಸಿದ
Last Updated 3 ಜೂನ್ 2022, 4:34 IST
ಅಕ್ಷರ ಗಾತ್ರ

ವಿಜಯಪುರ: ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು ಭೂಸ್ವಾಧೀನವನ್ನು ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 60 ದಿನಗಳು ಪೂರೈಸಿದ್ದು, 61 ನೇ ದಿನದಿಂದ ಅಹೋರಾತ್ರಿ ಧರಣಿ ನಡೆಸಲಿಕ್ಕೆ ರೈತರು ನಿರ್ಧರಿಸಿದ್ದಾರೆ.

‘60 ದಿನಗಳಿಂದ ನಾವು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ. ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಇಲ್ಲಿಗೆ ಬಂದಿಲ್ಲ. ನಾವು ತುಂಬಾ ಶಾಂತರೀತಿಯಿಂದ ಹೋರಾಟ ಮಾಡುತ್ತಿದ್ದೇವೆ. ಇನ್ನು ಮುಂದೆ ಅಹೋರಾತ್ರಿ ಧರಣಿಯನ್ನು ಮಾಡಲಿದ್ದೇವೆ. ನಮಗೆ ನ್ಯಾಯ ಸಿಗುವ ತನಕ ಇಲ್ಲಿಂದ ವಾಪಸ್ಸು ಹೋಗುವ ಪ್ರಮೇಯವೇ ಇಲ್ಲ. ರೈತರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಸರ್ಕಾರವೇ ನೇರ ಹೊಣೆಯಾಗುತ್ತದೆ’ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ಧರಣಿಯ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ವಿಜಯಕುಮಾರ್ ಅವರು, ‘ರೈತರನ್ನು ಮನವೊಲಿಸಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಲಿಕ್ಕೆ ನಾವು ನಿಮ್ಮ ಜೊತೆಗಿದ್ದೇವೆ. ನೀವೂ ಬನ್ನಿ ಒಂದು ದಿನವನ್ನು ನಿಗದಿಪಡಿಸುತ್ತೇವೆ’ ಎಂದು ಆಹ್ವಾನ ನೀಡಿದರು.

‘ಕೆಐಎಡಿಬಿಗೆ ರೈತರು ನೀಡಿರುವ ದಾಖಲೆಗಳನ್ನು ಬಹಿರಂಗಪಡಿಸಲಿಕ್ಕೆ ಸಾಧ್ಯವಿಲ್ಲ. ಕೈಗಾರಿಕಾ ಸಚಿವರೊಂದಿಗೆ ಮಾತನಾಡಿ, ಒಂದು ದಿನಾಂಕ ನಿಗದಿಪಡಿಸುತ್ತೇವೆ’ ಎಂದು ಅಧಿಕಾರಿ ವಾಪಸ್ಸು ಹೋದರು.

ಸುಮಾರು 100ಕ್ಕೂ ಹೆಚ್ಚು ರೈತರು 60ನೇ ದಿನದ ಧರಣಿಯಲ್ಲಿ ಭಾಗವಹಿಸಿದ್ದರು. ಸರ್ಕಾರ, ಹಾಗೂ ಕೆಐಎಡಿಬಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೋರಾಟಗಾರರಾದ ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರೋಣಪ್ಪ, ಮೋಹನ್ ಕುಮಾರ್, ಮುಕುಂದ್, ನಂಜೇಗೌಡ, ಅಶ್ವಥಗೌಡ, ರಾಮಾಂಜಿನಪ್ಪ, ಗೋಪಾಲಪ್ಪ, ಲಕ್ಷ್ಮಮ್ಮ, ಈರಮ್ಮ, ರಮೇಶ್, ಮಾರುತೇಶ್, ಸೇರಿದಂತೆ 13 ಹಳ್ಳಿಗಳ ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT