ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಳಿವಿನಂಚಿಗೆ ಗೊರವರ ಕುಣಿತ; ಈ ಕಲೆಯಿಂದ ದೂರವಾದ ಯುವ ಸಮುದಾಯ

Published : 11 ಸೆಪ್ಟೆಂಬರ್ 2024, 4:14 IST
Last Updated : 11 ಸೆಪ್ಟೆಂಬರ್ 2024, 4:14 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಜಾನಪದ ನೃತ್ಯಗಳಲ್ಲಿ ಗೊರವರ ಕುಣಿತವೂ ಒಂದು. ಆದರೆ, ಈಚೆಗೆ ಕಣ್ಮರೆಯಾಗುತ್ತಿದೆ. ಯುವ ಸಮುದಾಯ ಈ ಕಲೆಯಿಂದ ದೂರ ಉಳಿದಿದೆ. ಶ್ರೀಮಂತ ಕಲೆಯೊಂದು ಅಳಿವಿನಂಚಿನಲ್ಲಿದೆ ಎಂದು ಕಲಾವಿದ ಕೃಷ್ಣಪ್ಪ ಆತಂಕ ವ್ಯಕ್ತಪಡಿಸುತ್ತಾರೆ.

‘ನಮ್ಮ ಹಿರಿಯರಿಂದ ಸಾಂಪ್ರದಾಯಿಕವಾಗಿ ಬಂದಿರುವ ಗೊರವರ ಕುಣಿತ ಆಧುನಿಕ ಸೆಳೆತಕ್ಕೆ ಸಿಲುಕಿದೆ. ನಮ್ಮ ತಲೆಮಾರಿಗೆ ಅಂತ್ಯವಾಗುವ ಆತಂಕವಿದೆ. ಯುವಕರು ಈ ನೃತ್ಯ ಮಾಡಲು ಮುಂದೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

9ರಿಂದ 12 ಮಂದಿ ತಂಡ ಕಟ್ಟಿಕೊಂಡು ಏಳುಕೋಟಿ ಮೈಲಾರ ಲಿಂಗೇಶ್ವರ ದೇವರನ್ನು ಪೂಜಿಸಿ ಜಾತ್ರೆ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಕುಣಿತ ಪ್ರದರ್ಶನ ಮಾಡುವುದು ವಾಡಿಕೆ.

ಇತರ ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಕಂಸಾಳೆಯಂತೆ ಗೊರವರ ಕುಣಿತವೂ ಹೆಸರು ವಾಸಿಯಾಗಿದೆ. ರಾಜ್ಯದ ಕೆಲವು ಸಾಂಸ್ಕೃತಿಕ ಉತ್ಸವಗಳಲ್ಲಿ ಮಾತ್ರ ಈ ಕಲಾ ಪ್ರದರ್ಶನ ಕಂಡು ಬರುತ್ತಿದೆ. ಉಳಿದಂತೆ ಸಾಂಪ್ರದಾಯಿಕವಾಗಿ ಬರುವ ಕಲಾವಿದರ ಸಂಖ್ಯೆಯೂ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಜಾನಪದ ಕಲಾವಿದ ಮುನಿರಾಜು ಬೇಸರ ವ್ಯಕ್ತಪಡಿಸುತ್ತಾರೆ.

ಗೊರವರ ಕುಣಿತದಲ್ಲಿ ದೇವರಷ್ಟೇ ಅಲ್ಲದೆ ಜನರ ಜೀವನ ಕೂಡ ಹಾಸುಹೊಕ್ಕಾಗಿದೆ. ಮುಂದಿನ ಪೀಳಿಗೆಗೂ ಗೊರವರ ವೇಷಭೂಷಣದ ಮಹತ್ವ, ಸಂಪ್ರದಾಯ ಪರಿಚಯವಾಗಬೇಕು. ಡೊಳ್ಳು ಕುಣಿತದಂತೆಯೇ ಗೊರವರ ಕುಣಿತದ ತರಬೇತಿ ಯುವಕರಿಗೆ ನೀಡಬೇಕು. ಆಗ ಮಾತ್ರ ಈ ಜಾನಪದ ಕಲೆ ಉಳಿಯಲು ಸಾಧ್ಯ ಎನ್ನುತ್ತಾರೆ ಅವರು.

ಗೊರವರ ಕುಣಿತ ಕರ್ನಾಟಕದ ಕುರುಬಗೌಡ ಸಮುದಾಯದ ಒಂದು ಸಾಂಪ್ರದಾಯಿಕ ನೃತ್ಯ ಕಲೆ. ಕುರುಬಗೌಡರು ಮೈಲಾರ ಲಿಂಗೇಶ್ವರ ದೇವರ ಭಕ್ತರು. ಪುರುಷರು ದೀಕ್ಷೆ ಪಡೆದಿರುತ್ತಾರೆ. ಇಂತಹ ದೀಕ್ಷೆ ಮದುವೆ ಮುಂಚಿತವಾಗಿ ಪಡೆದಿರುತ್ತಾರೆ. ಇಡೀ ಜೀವನ ಮೈಲಾರ ಲಿಂಗ ಮತ್ತು ಗೊರವರ ನೃತ್ಯಕ್ಕೆ ಮುಡಿಪಾಗಿಡುತ್ತಾರೆ.

ಗೊರವರು ಧರಿಸುವ ಉಡುಪು ಗೊರವರು ಧರಿಸುವ ಉಡುಗೆ ಸಾಂಸ್ಕೃತಿಕವಾಗಿ ವೈವಿಧ್ಯಮಯ. ತಲೆ ರುಮಾಲಿನ ಮೇಲೆ ಕರಡಿ ಚರ್ಮ, ಬಿಳಿ ಅಥವಾ ಹಳದಿ ಬಣ್ಣದ ಕಚ್ಚೆ ಧರಿಸಿರುತ್ತಾರೆ. ತುಂಬು ತೋಳಿನ ಜುಬ್ಬ ಧರಿಸಿ, ಬಲಗೈಯಲ್ಲಿ ಢಮರುಗ ಹಿಡಿದಿರುತ್ತಾರೆ. ಎಡಗೈಯಲ್ಲಿ ನಾಗಬೆತ್ತ ಹಿಡಿದು, ಹಣೆಗೆ ವಿಭೂತಿ ಹಚ್ಚಿ, ಕಣ್ಣಿನ ಸುತ್ತ ಬಿಳಿ ಮತ್ತು ಕೆಂಪು ವರ್ಣದ ವೃತ್ತಗಳನ್ನು ಬಳಿದುಕೊಂಡು ಕಣ್ಣು ಅರಳಿಸುತ್ತಾ ಹುಬ್ಬೇರಿಸುವಂತೆ ಕುಣಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT