ಹೆಚ್ಚು ಆರೋಗ್ಯ ಶಿಬಿರ ಆಯೋಜಿಸಿ: ಜಿ.ನಾಗರಾಜು

7

ಹೆಚ್ಚು ಆರೋಗ್ಯ ಶಿಬಿರ ಆಯೋಜಿಸಿ: ಜಿ.ನಾಗರಾಜು

Published:
Updated:
Deccan Herald

ಆನೇಕಲ್: ಆನೇಕಲ್‌ ತಾಲ್ಲೂಕಿನ ಪ್ರತಿಷ್ಠಿತ ಆಸ್ಪತ್ರೆಗಳು ಸಾಮಾಜಿಕ ಜವಾಬ್ದಾರಿ ಅಡಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರ ಆರೋಗ್ಯ ಕಾಪಾಡಲು ಶ್ರಮಿಸಬೇಕು ಎಂದು ನೆರಳೂರು ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಜಿ.ನಾಗರಾಜು ತಿಳಿಸಿದರು.

ಪಟ್ಟಣದ ಮಾರುತಿ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದ ಯುವ ಸೇನೆ ಮತ್ತು ವಿದ್ಯಾ ಗಣಪತಿ ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ‘ಬೃಹತ್ ಉಚಿತ ನೇತ್ರ ಮತ್ತು ಆರೋಗ್ಯ ತಪಾಸಣಾ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನರು ಆರೋಗ್ಯ ಕಾಪಾಡಿಕೊಳ್ಳಲು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವೆಚ್ಚ ಮಾಡಬೇಕಾಗಿದೆ. ಒಂದೇ ಸೂರಿನಡಿಯಲ್ಲಿ ತಜ್ಞ ವೈದ್ಯ ಸೇವೆಗಳು ಆರೋಗ್ಯ ಶಿಬಿರದಲ್ಲಿ ದೊರೆಯುತ್ತಿರುವುದರಿಂದ ಅನುಕೂಲವಾಗಿದೆ. ಹಾಗಾಗಿ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಅತ್ತಿಬೆಲೆ ಸರ್ಕಲ್ ಇನ್‌ಸ್ಪೆಕ್ಟರ್ ಎಲ್.ವೈ. ರಾಜೇಶ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಸಮಾಜಕ್ಕೆ ಅತ್ಯಂತ ಅವಶ್ಯಕವಾದವು. ಇವುಗಳು ಚೆನ್ನಾಗಿದ್ದರೆ ಜೀವನವೇ ಬದಲಾಗಲು ಸಾಧ್ಯ. ಆರೋಗ್ಯವಿಲ್ಲದೇ ಕೋಟ್ಯಂತರ ಹಣವಿದ್ದರೂ ಯಾವುದೇ ಉಪಯೋಗವಿಲ್ಲ. ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಹಲವಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೇ ರೋಗ ಉಲ್ಭಣಿಸಿದ ನಂತರ ಪರದಾಡುತ್ತಾರೆ. ಪ್ರಾರಂಭದಲ್ಲಿಯೇ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಬೃಹತ್ ವೈದ್ಯಕೀಯ ಶಿಬಿರಗಳು ವರದಾನವಾಗಿದೆ ಎಂದರು.

ನಟ ಪ್ರಥಮ್ ಮಾತನಾಡಿ, ಸಂಘ ಸಂಸ್ಥೆಗಳು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಜನರ ಒಡನಾಡಿಗಳಾಗಬೇಕು. ಸ್ವಾಮಿ ವಿವೇಕಾನಂದ ಯುವ ಸೇನೆಯು ದೇಶಾಭಿಮಾನ, ಪರಿಸರ ಸಂರಕ್ಷಣೆ, ಸಾಕ್ಷರತೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಉಳ್ಳವರು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸ್ವಾಮಿ ವಿವೇಕಾನಂದ ಯುವ ಸೇನೆಯ ಅಧ್ಯಕ್ಷ ಎಂ.ದೊಡ್ಡಯ್ಯ ಮಾತನಾಡಿ, ಶಿಬಿರದಲ್ಲಿ ನಾರಾಯಣ ಹೃದಯಾಲಯ, ನಾರಾಯಣ ನೇತ್ರಾಲಯ, ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಭಾಗಿಗಳಾಗಿದ್ದಾರೆ. ಬಿಪಿ, ಸಕ್ಕರೆಕಾಯಿಲೆ, ಇಸಿಜಿ, ಕ್ಯಾನ್ಸರ್, ಹೃದಯಕ್ಕೆ ಸಂಬಂಧಿತ ಕಾಯಿಲೆಗಳ ತಪಾಸಣೆ, ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕಗಳ ವಿತರಣೆ, ಸಾಮಾನ್ಯ ರೋಗಗಳು, ಕೀಲು, ಚರ್ಚ ರೋಗಗಳ ಪರೀಕ್ಷೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಕಲ್ಪಿಸಿಕೊಡಲಾಗಿದೆ. ಶಿಬಿರದಲ್ಲಿ ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಬೊಮ್ಮಸಂದ್ರ ಪುರಸಭಾ ಸದಸ್ಯ ಚಲಪತಿ, ಆಸರೆ ಸಂಸ್ಥೆಯ ದೇವರಾಜ್ ನಾಯ್ಕ್, ಆಕ್ಸ್‌ಫರ್ಡ್ ಸಂಸ್ಥೆಯ ಡಾ.ಸ್ಮಿತಾ, ಮುಖಂಡರಾದ ಅಶೋಕ್, ಮುರಳಿ, ಸತ್ಯ, ಮೋಹನ್, ಚಂದ್ರಾರೆಡ್ಡಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !