ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು:ನ್ಯಾಯಾಂಗ ತನಿಖೆಗೆ ಉಗ್ರಪ್ಪ ಒತ್ತಾಯ

ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು ಪ್ರಕರಣ
Last Updated 26 ಏಪ್ರಿಲ್ 2020, 15:42 IST
ಅಕ್ಷರ ಗಾತ್ರ

ಆನೇಕಲ್: ‘ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡದೇ ಬಿಜೆಪಿ ಮುಖಂಡರಿಗೆ ಸೇರಿದ ಖಾಸಗಿ ಗೋದಾಮಿನಲ್ಲಿ 1,879 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡುವ ಮೂಲಕ ಅಕ್ರಮವೆಸಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜನರಿಗಾಗಿ ನೀಡಲಾಗಿರುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಹುನ್ನಾರ ಇದರಲ್ಲಿದೆ. ದೂರಿನ ಬಗ್ಗೆ ತನಿಖೆ ಮಾಡಲು ಸ್ಥಳಕ್ಕೆ ಆಗಮಿಸಿರುವ ಸಚಿವರು, ಜಿಲ್ಲಾಧಿಕಾರಿಗಳು ದೂರು ನೀಡಿದ, ಆರೋಪ ಮಾಡಿದ ಶಾಸಕರನ್ನು ಸ್ಥಳಕ್ಕೆ ಕರೆಯದೇ ಏಕಪಕ್ಷೀಯವಾಗಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿರುವುದು ಸಹಜ ನ್ಯಾಯಕ್ಕೆ ವಿರೋಧವಾಗಿದೆ’ ಎಂದರು.

‘ತಹಶೀಲ್ದಾರ್ ಅವರ ವರದಿಯಲ್ಲಿ ಸರ್ಜಾಪುರದ ವಿದ್ಯಾ ನಗರದ ಖಾಸಗಿ ಗೋದಾಮಿನಲ್ಲಿ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘವು ಪಡಿತರಕ್ಕಾಗಿ ಪಡೆಯಲಾಗಿರುವ 1,879 ಕ್ವಿಂಟಲ್‌ ಅಕ್ಕಿಯನ್ನು ಯಾವುದೇ ಮಾಹಿತಿ ನೀಡದೆ ದಾಸ್ತಾನು ಮಾಡಲಾಗಿದೆ. ಹೆಚ್ಚುವರಿ ದಾಸ್ತಾನನ್ನು ಸ್ವೀಕರಿಸುವ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಗೋದಾಮಿನಲ್ಲಿ ಭದ್ರತೆಯಿಲ್ಲದೇ, ಸೂಚನಾ ಫಲಕವಿಲ್ಲದೇ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್‌ ಅವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ಈ ನೋಟಿಸ್‌ ಅಕ್ರಮ ಎಸಗಿರುವುದಕ್ಕೆ ಸ್ವಯಂ ವಿವರಣಾತ್ಮಕವಾಗಿದೆ. ಆದರೂ ಸಚಿವ ಗೋಪಾಲಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್‌ಚಿಟ್‌ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಬೆಂಗಳೂರು ನಗರ ಜಿಲ್ಲೆಯು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಉಸ್ತುವಾರಿಯಲ್ಲಿದೆ ಹಾಗಾಗಿ ಈ ಪ್ರಕರಣವನ್ನು ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸುವ ಮೂಲಕ ಬದ್ಧತೆ ತೋರಬೇಕು’ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ‘ಏಪ್ರಿಲ್‌ 20ರಂದು ಮಾಧ್ಯಮದವರ ಜೊತೆಗೆ ದಾಸ್ತಾನು ಮಳಿಗೆಗೆ ಭೇಟಿ ನೀಡಿದಾಗ ಖಾಸಗಿ ಗೋದಾಮಿನ ಮಾಲೀಕರು ರೇಷ್ಮೆ ಬೆಳೆಗಾರರ ಸಂಘದವರು ದಾಸ್ತಾನು ಮಾಡಿದ್ದಾರೆ. ನಮಗೇನು ಗೊತ್ತಿಲ್ಲ ಎಂದು ತಿಳಿಸಿದ್ದರು. ಆದರೆ ಬಾಡಿಗೆಗೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಬಾಡಿಗೆ ಪಡೆಯುವ ಮುನ್ನ ಮೇಲಧಿಕಾರಿಗಳ ಅನುಮತಿ ಪಡೆದಿಲ್ಲ. ಸುಮಾರು 25 ಕಲ್ಯಾಣ ಮಂಟಪಗಳು ಮತ್ತು ಸರ್ಕಾರಿ ಶಾಲೆಗಳು ಖಾಲಿಯಿದ್ದರೂ 1,879 ಕ್ವಿಂಟಲ್‌ ಅಕ್ಕಿಯನ್ನು ಖಾಸಗಿ ಗೋದಾಮಿನಲ್ಲಿ ಶೇಖರಣೆ ಮಾಡುವ ಮೂಲಕ ಅಕ್ರಮ ಎಸೆಗಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ನಿಜಾಂಶ ಹೊರತರಬೇಕು’ ಎಂದರು.

ಮುಖಂಡರಾದ ಬನಹಳ್ಳಿ ರಾಮಚಂದ್ರರೆಡ್ಡಿ, ಗೋಪಾಲರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT