ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲದಕ್ಕೂ ಸರ್ಕಾರಿ ಉದ್ಯೋಗ ಸರಿಯಲ್ಲ’

Last Updated 5 ಆಗಸ್ಟ್ 2019, 14:50 IST
ಅಕ್ಷರ ಗಾತ್ರ

ವಿಜಯಪುರ: ‘ಸರ್ಕಾರಿ ಉದ್ಯೋಗಗಳನ್ನೇ ನೆಚ್ಚಿಕೊಂಡು ವಿದ್ಯಾಭ್ಯಾಸ ಮಾಡುವುದು ಸರಿಯಲ್ಲ. ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿಯೂ ಜೀವನೋಪಾಯಕ್ಕೆ ಅನೇಕ ಮಾರ್ಗಗಳಿವೆ. ಅಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಯಲ್ ನರ್ಸಿಂಗ್‌ ಬೋಧನಾ ತರಬೇತಿ (ಎನ್.ಟಿ.ಟಿ.), ಪ್ರಾಥಮಿಕ ಶಿಕ್ಷಣ ಬೋಧನಾ ತರಬೇತಿ (ಪಿ.ಟಿ.ಟಿ.) ಕೋರ್ಸ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಹತ್ತನೇ ತರಗತಿ ಅಥವಾ ಪಿಯುಸಿ ಡಿಪ್ಲೊಮಾ, ಡಿಗ್ರಿ ಕೋರ್ಸ್‌ಗಳನ್ನು ಮುಗಿಸಿದರೂ ಉತ್ತಮ ಅಂಕ ಗಳಿಸದಿದ್ದರೆ ಉದ್ಯೋಗ ಸಿಗುವುದು ಅನುಮಾನ. ಹೆಚ್ಚಿನ ಅಂಕ ಗಳಿಸಿದವರನ್ನು ಸರ್ಕಾರಿ ನೇಮಕಾತಿಗಳಲ್ಲಿ ಶೇಕಡವಾರು ಅಂಕಗಳ ಮಾನದಂಡದಡಿಯಲ್ಲಿ ನೇಮಕ ಮಾಡಿಕೊಳ್ಳುತ್ತಾರೆ ಎಂದರು.

ಶೇಕಡವಾರು ಅಂಕ ಗಳಿಸಿದವರೂ ಉದ್ಯೋಗ ಸಿಗಲಿಲ್ಲ ಎನ್ನುವ ಕಾರಣ ಕುಗ್ಗಬೇಕಾಗಿಲ್ಲ. ಎನ್.ಟಿ.ಟಿ. ಮತ್ತು ಪಿ.ಟಿ.ಟಿ. ತರಬೇತಿ ಪಡೆದುಕೊಳ್ಳುವ ಮೂಲಕ ಪ್ರಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ. ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಮಕ್ಕಳನ್ನು ಜ್ಞಾನವಂತರಾಗಿಸಬಹುದು ಎಂದರು.

‘ಉದ್ಯೋಗ ಅಂದರೆ ಕೇವಲ ಹಣ ಸಂಪಾದಿಸುವುದೊಂದೇ ಗುರಿಯಾಗಬಾರದು. ನಾವು ಮಾಡುವ ಉದ್ಯೋಗ ನಮ್ಮ ಅಗತ್ಯಗಳನ್ನು ಪೂರೈಸಬೇಕು. ನಾವು ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿರಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಂಜನ ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಡಾ.ವಿ.ಎನ್. ರಮೇಶ್, ನಿರುದ್ಯೋಗವು ಸಮಸ್ಯೆ ನಿರಂತರವಾಗಿ ಕಾಡಲಿಕ್ಕೆ ಮೂಲ ಕಾರಣ. ಅಂಕ ಗಳಿಕೆಯೊಂದೇ ಅಲ್ಲದೆ ಉದ್ಯೋಗ ಅವಕಾಶಗಳನ್ನು ಒದಗಿಸುವಂತಹ ವೇದಿಕೆಗಳು ಕಡಿಮೆಯಾಗುತ್ತಿವೆ ಎಂದರು.

‘ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಲ್ಲಿ ಸರ್ಕಾರಗಳೂ ವಿಫಲವಾಗುತ್ತಿರುವ ಕಾರಣದಿಂದ ಇಂದು ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಒಂದಷ್ಟು ಜನರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸುತ್ತಿವೆ’ ಎಂದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿಮ್ಮ ಅಂಕಪಟ್ಟಿಯಲ್ಲಿನ ಅಂಕಗಳನ್ನು ನೋಡುವುದಿಲ್ಲ. ಕೌಶಲ, ಮಕ್ಕಳ ಬೆಳವಣಿಗೆಗೆ ಪೂರಕವಾಗಿರುವ ಉತ್ತಮ ಸಂಪನ್ಮೂಲ ನಿಮ್ಮಲ್ಲಿದ್ದರೆ ನೀವು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಅಂತಹ ಕೌಶಲಗಳನ್ನು ಬೆಳೆಸುವುದಕ್ಕಾಗಿ ತರಬೇತಿ ಕೇಂದ್ರ ಆರಂಭವಾಗುತ್ತಿದ್ದು ಈಗಿನ ಪರಿಸ್ಥಿತಿಗೆ ಅವಶ್ಯವಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್ ಮಾತನಾಡಿ, ‘ಕಲಿಕೆಯೆಂಬುದು ನಿರಂತರವಾದದ್ದು. ಪ್ರತಿಯೊಬ್ಬರೂ ಸಮಾಜದ ಏಳಿಗೆ ಮತ್ತು ತಮ್ಮ ಜೀವನೋಪಾಯಕ್ಕಾಗಿ ಉದ್ಯೋಗ ಮಾಡಬೇಕೆನ್ನುವ ಬಯಕೆ ಹೊಂದಿದ್ದಾರೆ. ಆದರೆ ಆಯಾ ಉದ್ಯೋಗಾನುಸಾರವಾಗಿ ಉತ್ತಮ ಕೌಶಲಗಳನ್ನು ಹೊಂದಿರದ ಕಾರಣದಿಂದಾಗಿ ಇಂದು ಸಮಾಜವು ಅಭಿವೃದ್ಧಿಯಿಂದ ಹಿಂದುಳಿಯುತ್ತಿದೆ’ ಎಂದರು.

ಅಧ್ಯಕ್ಷತೆಯನ್ನು ರಾಯಲ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಚಂದ್ರಮುಖಿ ರಮೇಶ್ ವಹಿಸಿದ್ದರು. ಚಲನಚಿತ್ರ ನಟಿ ಮಾಲತಿಗೌಡ, ನಿರ್ಮಾಪಕ ಮುನೇಗೌಡ, ಮುಖಂಡ ಜೆ.ಎನ್. ಶ್ರೀನಿವಾಸ್, ವಿ.ಎನ್. ವೆಂಕಟೇಶ್, ವಿ.ನಾಗಯ್ಯ, ಆರ್. ಮುನಿರಾಜು, ಶೃಂಗೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ. ಜೆ. ಅರ್ಚನಾ, ವಿ.ಆರ್. ರಮ್ಯಶ್ರೀ, ಕೆ.ಮಧುಕುಮಾರ್, ವಾಣಿಶ್ರೀ, ಚೈತ್ರಾ, ಗಾಯಿತ್ರಿ, ಚಂದ್ರಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT