ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

ಕೊರೊನಾ ವಾರಿಯರ್ಸ್‌ ಎಂದು ಘೋಷಿಸಲು ಒತ್ತಾಯ
Last Updated 17 ಜೂನ್ 2021, 5:36 IST
ಅಕ್ಷರ ಗಾತ್ರ

ಸೂಲಿಬೆಲೆ: ಟಾಸ್ಕ್‌ಫೋರ್ಸ್‌ನಲ್ಲಿ ಕೋವಿಡ್ ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ವಿಮೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ಹೊಸಕೋಟೆ ತಾಲ್ಲೂಕಿನ ಲಕ್ಕೊಂಡಹಳ್ಳಿಯಲ್ಲಿ ಪ್ರತಿಭಟನೆ ನಡೆಯಿತು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್ಮಾತನಾಡಿ, ರಾಜ್ಯದ 6,024 ಗ್ರಾಮ ಪಂಚಾಯಿತಿಗಳಲ್ಲಿ ಸ್ವೀಪರ್, ವಾಟರ್‌ಮನ್, ಬಿಲ್ ಕಲೆಕ್ಟರ್, ಕಂಪ್ಯೂಟರ್‌ ಆಪರೇಟರ್ ಸೇರಿದಂತೆ ಇನ್ನಿತರ ಸಿಬ್ಬಂದಿ ಪ್ರತಿನಿತ್ಯ ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಂಕಿನಿಂದ ಕೆಲವು ಸಿಬ್ಬಂದಿ ಮೃತರಾಗಿದ್ದಾರೆ. ಪಂಚಾಯಿತಿ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಸರ್ಕಾರ ಘೋಷಿಸಬೇಕು. ಕೋವಿಡ್‌ಗೆ ಒಳಗಾದ ಸಿಬ್ಬಂದಿಗೆ ಔಷಧ ವೆಚ್ಚ ಭರಿಸಬೇಕು. ಸುರಕ್ಷತಾ ಪರಿಕರ ಒದಗಿಸಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆ ಮತ್ತು ಪಂಚಾಯಿತಿಗಳ ಸ್ವಂತ ಸಂಪನ್ಮೂಲದಿಂದ ಸಿಬ್ಬಂದಿಗೆ ವೇತನ ನೀಡಲು ಸರ್ಕಾರ ಆದೇಶಿಸಿದೆ. ಆದರೂ, ಹಲವು ಗ್ರಾಮ ಪಂಚಾಯಿತಿಗಳಲ್ಲಿ 8-10 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಬಿಲ್ ಕಲೆಕ್ಟರ್, ಗುಮಾಸ್ತ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಬಡ್ತಿ ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಇದನ್ನು ವಾಪಸ್ ಪಡೆದು ಬಡ್ತಿ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತಿಂಗಳ ಮೊದಲನೇ ದಿನ ವೇತನ ಪಾವತಿಗೆ ಕ್ರಮಕೈಗೊಳ್ಳಲಾಗಿದೆ. ಯಾವುದಾದರೂ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನ ಬಿಡುಗಡೆಯಾಗದಿದ್ದರೆ ನನ್ನ ಗಮನಕ್ಕೆ ತರಲು ಸೂಚಿಸುತ್ತೇನೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT