ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಚೌಡೇಶ್ವರಿ ದೇವಿ ವಿಜಯದಶಮಿ ಉತ್ಸವ

Last Updated 19 ಅಕ್ಟೋಬರ್ 2018, 13:26 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದ ಶ್ರೀ ಚೌಡೇಶ್ವರಿ ದೇವಿಯ ವಿಜಯ ದಶಮಿ ಉತ್ಸವ ಸಂಭ್ರಮ ಸಡಗರಗಳಿಂದ ನೆರವೇರಿತು. ವೈಭವದ ಉತ್ಸವಕ್ಕೆ ಆನೇಕಲ್‌ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಸಾಕ್ಷಿಯಾದರು.

ವಿಜಯದಶಮಿ ಉತ್ಸವದ ಪ್ರಯುಕ್ತ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿ, ಅಲಂಕೃತ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆನೆಯ ಅಂಬಾರಿಯ ಮೇಲೆ ಕುಳ್ಳರಿಸಲಾಯಿತು ಮಧ್ಯಾಹ್ನ 3ರ ವೇಳೆಗೆ ದೇವಿಯನ್ನು ಹೊತ್ತ ಆನೆ ಮಂಗಳವಾದ್ಯ, ಕಳಶಗಳು ಹಾಗೂ ಜಾನಪದ ತಂಡಗಳೊಂದಿಗೆ ತಿಲಕ್‌ ವೃತ್ತಕ್ಕೆ ಬಂದಿತು. ಈ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಾಲಗಂಗಾಧರ್ ತಿಲಕ್‌ ವೃತ್ತದಲ್ಲಿ ಸಹಸ್ರಾರು ಜನರು ಜಮಾವಣೆಗೊಂಡಿದ್ದರು.

ದೊಡ್ಡಬಳ್ಳಾಪುರದ ಪುಷ್ಟಾಂಡಜ ಮುನಿ ಗುರುಪೀಠದ ದಿವ್ಯಾಜ್ಞಾನಾನಂದಗಿರಿ ಸ್ವಾಮೀಜಿಗಳು ಉತ್ಸವವನ್ನು ಉದ್ಘಾಟಿಸಿದರು. ಶಾಸಕ ಬಿ.ಶಿವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಸದಸ್ಯ ಬಂಡಾಪುರ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ, ಸದಸ್ಯ ಪುಷ್ಪರಾಜ್, ಪುರಸಭಾ ಅಧ್ಯಕ್ಷ ಪಿ.ಶಂಕರ್‌ ಕುಮಾರ್‌, ಉಪಾಧ್ಯಕ್ಷೆ ರೇಣುಕಾ ಮಲ್ಲಿಕಾರ್ಜುನ್‌, ಸದಸ್ಯರಾದ ಎನ್‌. ಎಸ್‌. ಪದ್ಮನಾಭ, ಮಲ್ಲಿಕಾರ್ಜುನ್‌, ಮುನಾವರ್, ಮೋಹನ್‌, ಸವಿತ ಶ್ರೀನಿವಾಸ್‌, ಮುನಿರತ್ನಮ್ಮ, ಚಂದ್ರಿಕ ಹನುಮಂತರಾವ್, ಜಯಲಕ್ಷ್ಮೀ ಮುನಿರಾಜು, ಜಿ.ಗೋಪಾಲ್‌, ಶೈಲೇಂದ್ರ ಕುಮಾರ್‌, ಮುಷ್ರಪ್ ಫಾಷ, ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಟಾಚಲಯ್ಯ ಹಾಜರಿದ್ದರು.

ಅಂಬಾರಿ ಹೊತ್ತ ಆನೆಯು ವೇದಿಕೆಯ ಬಳಿಗೆ ಬರುತ್ತಿದ್ದಂತೆ, ಅಂಬಾರಿಗೆ ಪೂಜೆ ಸಲ್ಲಿಸಿ ಪುಷ್ಟಾರ್ಚನೆ ಮಾಡಲಾಯಿತು. ಜಂಬೂ ಸವಾರಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮನೆಗಳ ಮೇಲೆ, ರಸ್ತೆಗಳ ಇಕ್ಕೆಲಗಳಲ್ಲಿ ಜನಜಾತ್ರೆ ಜಮಾವಣೆ ಗೊಂಡಿತ್ತು. ಅಂಬಾರಿಯೆಡೆಗೆ ಹೂವುಗಳನ್ನು ಎಸೆಯುವ ಮೂಲಕ ಬೀದಿಗಳಲ್ಲಿ ಭಕ್ತರು ಅಂಬಾರಿಯನ್ನು ಬರಮಾಡಿಕೊಂಡರು.

ಮೆರವಣಿಗೆಯಲ್ಲಿ ಕೇರಳದ ಚಂಡೆಮೇಳ, ಸಿಂಗಾರಿ ಮೇಳ, ತಾವಡಿ ಕುಣತ, ವೀರಗಾಸೆ, ಕಥಕಳಿ, ನಾಸಿಕ್‌ ಬ್ಯಾಂಡ್‌ ಮೇಳ, ಡೊಳ್ಳು ಕುಣಿತ, ಮೈಸೂರು ನಗಾರಿ, ಭೂತ ಕುಣಿತ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಅಂಬಾರಿಯು ತಿಲಕ್ ವೃತ್ತದಿಂದ ಹೊರಟ ಆನೆ ಅಂಬಾರಿಯು ‌ಥಳೀ ರಸ್ತೆ, ಚರ್ಚ್ ರಸ್ತೆ, ದೇವರಕೊಂಡಪ್ಪ ವೃತ್ತ, ಗಾಂಧೀ ವೃತ್ತದ ಮೂಲಕ ಕಂಬದ ಗಣಪತಿ ದೇವಾಲಯದ ಬಳಿಗೆ ಬಂದು ಅಲ್ಲಿಯ ಶಮಿವೃಕ್ಷಕ್ಕೆ ಅಂಬು ಎಸೆಯಲಾಯಿತು. ನಂತರ ದೇವಾಲಯದ ಬಳಿಗೆ ತೆರಳಿತು. ದೇವಾಲಯದ ಬಳಿ ಆಕರ್ಷಕ ಬಾಣ ಬಿರುಸು, ಪಂಜಿನ ಕವಾಯತು ನಡೆಯಿತು. ಈ ಕಾರ್ಯಕ್ರಮಗಳೊಂದಿಗೆ ಒಂಬತ್ತು ದಿನಗಳ ಶರನ್ನವರಾತ್ರಿ ಉತ್ಸವಕ್ಕೆ ವೈಭದವ ತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT