ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕ್ಕುರುಳಿದ ದ್ರಾಕ್ಷಿ ಗೊಂಚಲುಗಳು, ಅಪಾರ ನಷ್ಟ

ವಿಜಯಪುರ ಸುತ್ತಮುತ್ತ ಗುಡುಗು, ಸಿಡಿಲು ಸಮೇತ ಬಿದ್ದ ಮಳೆಯ ಆರ್ಭಟ
Last Updated 26 ಮೇ 2019, 13:32 IST
ಅಕ್ಷರ ಗಾತ್ರ

ವಿಜಯಪುರ: ಸತತವಾಗಿ ಏಳು ವರ್ಷಗಳಿಂದ ಮಳೆಯಿಲ್ಲದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ರೈತರು, ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲಿನ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಜಯಪುರ ಹೋಬಳಿಯ ಯಲುವಹಳ್ಳಿ, ಇರಿಗೇನಹಳ್ಳಿ, ಚಿಕ್ಕನಹಳ್ಳಿ, ಬಿಜ್ಜವಾರ, ಹೊಲೇರಹಳ್ಳಿ, ಕೋರಮಂಗಲ, ಚನ್ನರಾಯಪಟ್ಟಣ ಹೋಬಳಿ ಐಬಸಾಪುರ, ಗೋಪಸಂದ್ರ, ದೊಡ್ಡಕುರುಬರಹಳ್ಳಿ, ಹ್ಯಾಡ್ಯಾಳ, ಬೀಡಿಗಾನಹಳ್ಳಿ, ಸೇರಿದಂತೆ ಬಹುತೇಕ ಕಡೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಬಿದ್ದಿದೆ. ಇದರ ಆರ್ಭಟಕ್ಕೆ ಶೇ 80 ರಷ್ಟು ಬೆಳೆ ನಾಶವಾಗಿದ್ದು ಅಪಾರ ನಷ್ಟ ಅನುಭವಿಸಬೇಕಾಗಿದೆ.

ಆಲಿಕಲ್ಲಿನ ಹೊಡೆತಕ್ಕೆ ತೋಟಗಳಲ್ಲಿ ಹಣ್ಣಾಗುವ ಹಂತದಲ್ಲಿದ್ದ ದ್ರಾಕ್ಷಿ ಗೊಂಚಲುಗಳು ನೆಲಕ್ಕುರುಳಿ ತೋಟಗಳ ತುಂಬಾ ನೆಲದಲ್ಲಿ ಹರಡಿಕೊಂಡು ಬಿದ್ದಿವೆ. ಉಳಿದುಕೊಂಡಿರುವ ಗೊಂಚಲುಗಳಿಗೆ ಆಲಿಕಲ್ಲಿನ ಏಟು ತೀವ್ರವಾಗಿ ಬಿದ್ದಿರುವುದರಿಂದ ಗೊಂಚಲಿನಲ್ಲಿರುವ ಹಣ್ಣುಗಳು ಒಡೆದುಹೋಗಿ ಕೊಳೆಯಲಾರಂಬಿಸಿವೆ.

ಹೊಲೇರಹಳ್ಳಿ ಗ್ರಾಮದಲ್ಲಿ ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ತಿಮ್ಮನಹಳ್ಳಿ ಗ್ರಾಮದಲ್ಲಿ ಎರಡು ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದಿವೆ.

ತಹಶೀಲ್ದಾರ್ ಮಂಜುನಾಥ್, ಕಂದಾಯ ಇಲಾಖೆಯ ಪ್ರಭಾರ ರಾಜಸ್ವ ನಿರೀಕ್ಷಕ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ.‌

ನಗರದಲ್ಲಿ ಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ರಸ್ತೆಗಳಲ್ಲಿ ಹರಿದು ಮನೆಗಳಿಗೆ ನುಗ್ಗಿದ್ದರಿಂದ ಜನರು ರಾತ್ರಿಯಿಡೀ ಕೊಳಚೆ ನೀರನ್ನು ಮನೆಗಳಿಂದ ಹೊರಗೆ ಹಾಕಲು ಹರಸಾಹಸ ಪಡುವಂತಾಗಿತ್ತು. ಬಿರುಗಾಳಿ ಸಹಿತ ಮಳೆಯಾಗಿದ್ದ ಕಾರಣ, 18 ವಿದ್ಯುತ್ ಕಂಬಗಳು, ಎರಡು ಟ್ರಾನ್ಸ್‌ಫಾರ್ಮರ್‌ಗಳು ಮುರಿದು ಬಿದ್ದಿದ್ದರಿಂದ ರಾತ್ರಿಯಿಡೀ ಕತ್ತಲೆಯಲ್ಲೇ ಕಳೆಯುವಂತಾಗಿತ್ತು. ನಗರದಲ್ಲಿ ಚರಂಡಿಗಳು, ರಾಜಕಾಲುವೆಗಳಲ್ಲಿ ಸಿಕ್ಕಿಕೊಂಡಿದ್ದ ತ್ಯಾಜ್ಯವನ್ನು ಬೆಳಿಗ್ಗೆ ಪೌರಕಾರ್ಮಿಕರು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸಿದರು.

ರೇಷ್ಮೆ ಹುಳುಗಳಿಗೆ ಸಂಕಷ್ಟ: ರಾತ್ರಿ ಸುರಿದ ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಸೊಪ್ಪು ಹಾಳಾಗಿದ್ದರಿಂದ ಹುಳುಗಳಿಗೆ ಸೊಪ್ಪಿಲ್ಲದೆ, ಬೆಳೆಗಾರರು ಪರದಾಡುತ್ತಿದ್ದರು. ಕೆಲ ರೈತರು, ಆಲಿಕಲ್ಲಿನ ಮಳೆ ಬೀಳದ ಕಡೆಗಳಲ್ಲಿ ರೈತರಲ್ಲಿ ಸೊಪ್ಪನ್ನು ಎರವಲಾಗಿ ತೆಗೆದುಕೊಂಡು ಬಂದು ಹುಳುಗಳಿಗೆ ಹಾಕಿದರು.

ಯಲುವಹಳ್ಳಿ ಗ್ರಾಮದ ರೈತ ಗಜೇಂದ್ರ ಮಾತನಾಡಿ, ‘ಮಳೆಯ ಕೊರತೆಯ ನಡುವೆಯು ಕೊಳವೆ ಬಾವಿಗಳಿಂದ ನೀರು ತೆಗೆದು ತೋಟಗಳನ್ನು ಮಾಡಿದ್ದರೂ ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಕಷ್ಟು ಬಾರಿ ಆಲಿಕಲ್ಲಿನ ಮಳೆಗಳಿಂದಲೇ ಬೆಳೆ ನಷ್ಟವಾಗಿದೆ. ಬೆಳೆ ಉತ್ತಮವಾಗಿದ್ದರೆ, ಬೆಲೆ ಇರಲ್ಲ, ಬೆಲೆ ಇದ್ದಾಗ ಇಂತಹ ಪ್ರಾಕೃತಿಕ ವಿಕೋಪಗಳಿಗೆ ನಾವು ಒಳಗಾಗುತ್ತಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದೇವೆ. ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಸಾಲವನ್ನೂ ಮರುಪಾವತಿ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ’ ಎಂದರು.

ರೈತ ಮುನೇಗೌಡ ಮಾತನಾಡಿ, ‘ನಾವು ಎಂಟು ಎಕರೆ ದ್ರಾಕ್ಷಿ ತೋಟ ಮಾಡಿದ್ದೇವೆ. ಕಾರ್ಪೊರೇಷನ್ ಬ್ಯಾಂಕಿನಿಂದ ₹ 18 ಲಕ್ಷ ಸಾಲ ಪಡೆದು ಇದೇ ಮೊದಲ ಬಾರಿಗೆ ಬೆಳೆ ತುಂಬಾ ಚೆನ್ನಾಗಿ ಬಂದಿತ್ತು. ರಾತ್ರಿ ಸುರಿದ ಆಲಿಕಲ್ಲಿನ ಸಹಿತ ಮಳೆಯಿಂದಾಗಿ ಬೆಳೆಯೆಲ್ಲ ನೆಲಕಚ್ಚಿದೆ’ ಎಂದರು.

ಮಳೆಯಿಂದಾಗಿ ಎಲೆಗಳು ಹಾಳಾಗಿವೆ. ತೋಟದಲ್ಲಿ ಉಳಿದುಕೊಂಡಿರುವ ದ್ರಾಕ್ಷಿ ಗೊಂಚಲುಗಳು ಕಲ್ಲಿನ ಏಟಿಗೆ ಒಡೆದುಹೋಗಿದ್ದು ಕೊಳೆಯಲಾರಂಬಿಸಿದೆ. ಸುಮಾರು ₹ 20 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT