ದಲಿತರ ಮೇಲೆ ದೌರ್ಜನ್ಯ: ಕ್ರಮಕ್ಕೆ ಒತ್ತಾಯ

ಭಾನುವಾರ, ಜೂಲೈ 21, 2019
22 °C

ದಲಿತರ ಮೇಲೆ ದೌರ್ಜನ್ಯ: ಕ್ರಮಕ್ಕೆ ಒತ್ತಾಯ

Published:
Updated:
Prajavani

ದೇವನಹಳ್ಳಿ: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಭೀಮ್ ಶಕ್ತಿ) ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಕಾರಹಳ್ಳಿ ಕೆಂಪಣ್ಣ ‘ಗುಂಡ್ಲುಪೇಟೆ ತಾಲ್ಲೂಕು, ಶ್ಯಾನಡ್ರನಹಳ್ಳಿ ಗ್ರಾಮದ ಯುವಕನ ಬೆತ್ತಲೆ ಪ್ರಕರಣ, ಅರಸೀಕೆರೆ ತಾಲ್ಲೂಕಿನಲ್ಲಿ ನಡೆದ ದಲಿತ ನೀರುಗಂಟಿ ಮೇಲಿನ ಹಲ್ಲೆ, ಗುಜರಾತಿನಲ್ಲಿ ನೂತನ ಕಾರು ಖರೀದಿಸಿದ ದಲಿತನ ಮೇಲೆ ಸವರ್ಣಿಯರಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತರಿಗೆ ನ್ಯಾಯ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದಲಿತರ ಮೇಲೆ ಹಲ್ಲೆ, ಹತ್ಯೆ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಅನೇಕ ಘಟನೆಗಳು ನಡೆಯುತ್ತಿದ್ದು ಬೆರಳೆಣಿಕೆಯಷ್ಟು ಘಟನೆಗಳು ಮಾತ್ರ ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳು ದಲಿತ ಸಮುದಾಯದ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ. ದಲಿತರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಪ್ರಕರಣ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲವು ಠಾಣೆಗಳಲ್ಲಿ ದೂರು ನೀಡಲು ಹೋದ ಅಮಾಯಕರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸುತ್ತಾರೆ’ ಎಂದು ದೂರಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅನೇಕ ಯೋಜನೆಗಳಲ್ಲಿ ದಲಿತರಿಗಿರುವ ಮೀಸಲಾತಿ ಅನುದಾನ ಅರ್ಹರಿಗೆ ಸಿಗುತ್ತಿಲ್ಲ. ದಲಿತರ ಪಿಟಿಸಿಎಲ್ ಪ್ರಕರಣಗಳನ್ನು ಸಕಾಲದಲ್ಲಿ ವಿಚಾರಣೆ ಮಾಡದೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ನೇರವಾಗಿ ವಜಾ ಮಾಡಿ, ಪ್ರಭಾವಿಗಳ ಒತ್ತಡಕ್ಕೆ ಮಣಿದು, ದಲಿತರನ್ನು ಭಿಕ್ಷುಕರನ್ನಾಗಿ ಮಾಡುತ್ತಿದ್ದಾರೆ. ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳು ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಳೆದ ಆರು ತಿಂಗಳಿಂದ ದಲಿತರ ಕುಂದುಕೊರತೆ ಸಭೆ ನಡೆಸುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾಗಿದೆ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ಸಹಕಾರ್ಯದರ್ಶಿ ಮುರಳಿ, ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಜಿಲ್ಲಾ ಘಟಕ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಪೂಜಪ್ಪ, ಮುನಿರಾಜು ಇದ್ದರು. ಗ್ರೇಡ್ 2 ತಹಶೀಲ್ದಾರ್ ಅನಿಲ್ ಕುಮಾರ್ ಆರೋನಿಕಲ್ ಮನವಿ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !