ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಪಿಕ್ ಪಾಕೆಟ್ ಸರ್ಕಾರ ಆಡಳಿತ ನಡೆಸುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
Published 16 ಏಪ್ರಿಲ್ 2024, 5:05 IST
Last Updated 16 ಏಪ್ರಿಲ್ 2024, 5:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಪಿಕ್ ಪಾಕೆಟ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮದ್ಯದ ಬೆಲೆ ಏರಿಕೆ ಮಾಡಿ ಗಂಡಂದಿರ ಜೇಬಿನಿಂದ ಹಣ ಕಿತ್ತು ಗೃಹಲಕ್ಷ್ಮಿ ಹೆಸರಿನಲ್ಲಿ ಮಹಿಳೆಯರಿಗೆ ನೀಡುತ್ತಿದ್ದಾರೆ ಎಂದರು. 

‘ಕಾಂಗ್ರೆಸ್ ಪಕ್ಷದವರು ಅವರ ಮನೆಯಿಂದ ₹2 ಸಾವಿರ ತಂದುಕೊಡುತ್ತಿಲ್ಲ. ಶ್ರಮಜೀವಿಗಳು ಬೆವರು ಸುರಿಸಿ ದುಡಿದ ಹಣ ಅದು. ನಾನು ಬಡವರ ಯೋಜನೆಗಳ ವಿರೋಧಿ ಅಲ್ಲ. ಆದರೆ ಗ್ಯಾರೆಂಟಿ ಯೋಜನೆಗಳಿಂದ ಆಗುವ ಪರಿಣಾಮಗಳ ಕುರಿತು ಜನತೆ ಗಂಭೀರ ಚಿಂತನೆ ನಡೆಸಬೇಕಿದೆ’ ಎಂದರು.

ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ಗುತ್ತಿಗೆದಾರರಿಂದ ಹಣ ಲೂಟಿ ಮಾಡಲಾಗುತ್ತಿದೆ. ದೇಶದಲ್ಲಿ ಕಾಂಗ್ರೆಸ್ 60 ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದರ ಪರಿಣಾಮ ಹಾಗೂ ದೇಶದ ಸುಭದ್ರತೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

‘ಆಸ್ತಿ ನೋಂದಣಿ ಮಾಡಿಸಲು ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿ ಜನರ ತಲೆಗೆ ಕಟ್ಟಿ, ನುಡಿದಂತೆ ನಡೆದಿದ್ದೇವೆ ಎನ್ನುತ್ತಿದ್ದಾರೆ. ಸಮಿಶ್ರ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡಿದ್ದ ಮಾತಿನಂತೆ ಕೃಷಿ ಸಾಲ ಮನ್ನಾ ಮಾಡಿದ್ದೆ. ಆದರೆ ನಾನು ಕೇಂದ್ರದ ಮುಂದೆ ಹಣ ನೀಡುವಂತೆ ಕೇಳಿಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ನಾಟಕ ಆಡಲಿಲ್ಲ. ಜನರಿಗೆ ತೆರಿಗೆ ಜಾಸ್ತಿ ಮಾಡಲಿಲ್ಲ’ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾತನಾಡಿ, ‘ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಎರಡು ನಗರಗಳಿಗೂ ಕುಡಿಯುವ ನೀರಿನ ಮುಖ್ಯ ಆಸೆರೆಯಾಗಿರುವ ಜಕ್ಕಲಮೊಡಗು ಜಲಾಶಯದಿಂದ ನೀರು ಹರಿಯುವಂತೆ ಮಾಡುವಲ್ಲಿ ಹೆಚ್ಚಿನ ಶ್ರಮವಹಿಸಿರುವೆ. ಈ ಬಾಗಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿಸುವುದು ನನ್ನ ಸಂಕಲ್ಪ. ಉಸ್ತುವಾರಿ ಸಚಿವನಾಗಿದ್ದಾಗ ದೊಡ್ಡಬಳ್ಳಾಪುರಕ್ಕೆ ಜಿಲ್ಲಾಸ್ಪತ್ರೆ ಮಂಜೂರು ಮಾಡಿದ್ದೇನೆ. ಕೋವಿಡ್ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇನೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಅಭ್ಯರ್ಥಿಯಂತೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ನನಗೆ ಟಿಕೆಟ್ ನೀಡಿಲ್ಲ. ನನ್ನ ಸೇವೆ ನೋಡಿ ಟಿಕೆಟ್ ನೀಡಿದ್ದಾರೆ. ಹಣದಿಂದ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಜನರ ಪ್ರೀತಿ ಬೇಕು. ಇಂಡಿಯಾ ಕೂಟ ಭಾರತವನ್ನು ಮಾರಲು ಹೊರಟಿದೆ. ರಾಜ್ಯ ಸರ್ಕಾರ ಅಂದರ್ ಬಾಹರ್ ರೀತಿ ಜೂಜಾಡುತ್ತಿದೆ’ ಎಂದು ದೂರಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು. ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕೆರೆ ಕಲುಷಿತ ಸಮಸ್ಯೆ ಬಗೆಹರಿಸುವುದು, ಕೆಐಎಡಿಬಿ ಭೂಸ್ವಾಧೀನ ಸಮಸ್ಯೆ ಹಾಗೂ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯಕುಮಾರ್, ಎಸ್.ಎಂ.ಹರೀಶ್‌ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಇ.ಕೃಷ್ಣಪ್ಪ, ಎಚ್.ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ಬಿ.ಸಿ.ನಾರಾಯಣಸ್ವಾಮಿ, ಕೆ.ಎಂ.ಹನುಮಂತರಾಯಪ್ಪ, ಪುಷ್ಪಾ ಶಿವಶಂಕರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್‌, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಜೆಡಿಎಸ್ ನಗರ ಅಧ್ಯಕ್ಷ ವಿ.ಎಸ್‌.ರವಿಕುಮಾರ್, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸುನಿಲ್‌ಕುಮಾರ್ ಇದ್ದರು.

‘ಎತ್ತಿನಹೊಳೆ’ ಕಾಂಗ್ರೆಸ್‌ಗೆ ಹಾಲು ಕರೆಯುವ ಹಸು ಇದ್ದಂತೆ’  
2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ 2024ಆದರೂ ಇನ್ನು ಯೋಜನೆ ಪೂರ್ಣವಾಗಿಲ್ಲ. ಇನ್ನು ಹತ್ತು ವರ್ಷವಾದರೂ ಇದು ಆಗುವುದಿಲ್ಲ. ಈ ಯೋಜನೆ ಕಾಂಗ್ರೆಸ್‌ ಪಾಲಿಗೆ ಹಾಲು ಕರೆಯುವ ಹಸು ಇದ್ದಂತೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಇರಲಿ ಮೊದಲು ರಾಜ್ಯದಲ್ಲಿ ಖಾಲಿ ಇರುವ 2.75 ಲಕ್ಷ ಹುದ್ದೆಗಳನ್ನು ತುಂಬಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT