ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಹೆನ್ನಾಗರ ಕೆರೆ ಭರ್ತಿ: ಫಸಲು ನೀರು ಪಾಲು

Last Updated 2 ಸೆಪ್ಟೆಂಬರ್ 2022, 4:49 IST
ಅಕ್ಷರ ಗಾತ್ರ

ಆನೇಕಲ್:ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹೋಗುತ್ತಿವೆ.

ಬೆಂಗಳೂರು ನಗರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹೆನ್ನಾಗರ ಕೆರೆಯು ತುಂಬಿ ಕೋಡಿ ಹೋಗುತ್ತಿದ್ದು ಹೂವಿನ ತೋಟ, ತರಕಾರಿ ಬೆಳೆಗಳು ಸೇರಿದಂತೆ ವಿವಿಧ ಬೆಳೆಗಳು ನೀರು ಪಾಲಾಗಿವೆ.

ಹೆನ್ನಾಗರ ಕೆರೆಯು ಸುಮಾರು 700 ಎಕರೆ ವಿಸ್ತೀರ್ಣ ಹೊಂದಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಕೋಡಿ ಹೋಗಿದ್ದು ನೀರು ಜಲಪಾತದಂತೆ ಹರಿಯುತ್ತಿದೆ. ಒಂದು ಕೆರೆ ತುಂಬಿದರೆ ಮತ್ತೊಂದು ಕೆರೆಗೆ ನೀರು ಹರಿಯುವ ವ್ಯವಸ್ಥೆ ಪಾರಂಪರಿಕವಾಗಿ ನಡೆದು ಬಂದಿದೆ. ಆದರೆ, ನೀರಿನ ಹರಿಯುವಿಕೆಗೆ ಅನುಕೂಲವಾಗಿದ್ದ ರಾಜಕಾಲುವೆಗಳು ಮುಚ್ಚಿ ಹೋಗಿವೆ.

ನೀರಾವರಿ ಇಲಾಖೆಯವರು ಪ್ರತಿ ವರ್ಷ ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಕೋಡಿಯ ನೀರು ಸುಗಮವಾಗಿ ಹರಿದು ಹೋಗಲು ದಾರಿ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಮಳೆ ಕಡಿಮೆಯಾಗಿ ಕೆರೆ ಕೋಡಿ ಹೋಗುತ್ತಿರಲಿಲ್ಲ.

ಹಾಗಾಗಿ, ರಾಜಕಾಲುವೆಗಳನ್ನು ಸ್ವಚ್ಛ ಮಾಡುವ ಕೆಲಸವನ್ನು ಇಲಾಖೆಯು ಕೈಬಿಟ್ಟ ನಂತರ ರಾಜಕಾಲುವೆಗಳು ಒತ್ತುವರಿಯಾಗಿವೆ. ಕೆಲವೆಡೆ ಮುಚ್ಚಿ ಹೋಗಿ ಅಸ್ತಿತ್ವ ಕಳೆದು
ಕೊಂಡಿವೆ.

ಹಾಗಾಗಿ ಕೋಡಿಯ ನೀರು ತನ್ನ ಪಥವನ್ನು ಬಿಟ್ಟು ಹೊಲ, ಗದ್ದೆ, ತೋಟ, ಬಡಾವಣೆಗಳತ್ತ ತಿರುಗಿದ್ದು ಎಲ್ಲೆಡೆ ನೀರು ತುಂಬಿವೆ. ತೋಟಗಳು ಕೆರೆಗಳಂತಾಗಿವೆ. ಕೋಡಿ ನೀರು ನದಿಯೋಪಾದಿಯಲ್ಲಿ ಹರಿಯುತ್ತಿದ್ದು ಸುತ್ತಮುತ್ತಲಿನ ಪ್ರದೇಶದ ರಾಜಾಪುರ, ಹಿನ್ನಕ್ಕಿ, ಹೆನ್ನಾಗರ ಗ್ರಾಮದ ನೂರಾರು ರೈತರ ಬೆಳೆಗಳು ಹಾಳಾಗಿವೆ.

ಹೆನ್ನಾಗರ ಕೆರೆ ತುಂಬಿದರೆ ಚಂದಾಪುರ, ಮುತ್ತಾನಲ್ಲೂರು ಕೆರೆ ಮೂಲಕ ದಕ್ಷಿಣ ಪಿನಾಕಿನಿ ನದಿಯವರೆಗೂ ನೀರು ಹರಿಯುವ ಜಾಲವಿತ್ತು. ಆದರೆ, ಅಲ್ಲಲ್ಲಿ ಬಡಾವಣೆಗಳು ನಿರ್ಮಾಣವಾಗಿ ನೀರಿನ ಸುಗಮ ಹರಿಯುವಿಕೆಗೆ ಅಡ್ಡಿ ಉಂಟಾಗಿರುವುದರಿಂದ ಕೋಡಿ ನೀರು ತೋಟಗಳತ್ತ ಹರಿದಿದ್ದು ಬೆಳೆ ಹಾಳಾಗಿದೆ. ಹೆನ್ನಾಗರದ ರೈತರಾದ ಮುನಿರಾಜು, ಮುನಿಯಲ್ಲಪ್ಪ, ಕೃಷ್ಣಪ್ಪ, ಶ್ರೀನಿವಾಸ್‌ ಅವರ ಗುಲಾಬಿ ತೋಟಗಳು ಜಲಾವೃತವಾಗಿವೆ. ಮಳೆ ನೀರಿನಿಂದ ಗುಲಾಬಿ ಗಿಡಗಳು ಕೊಳೆಯುವಂತಾಗಿದೆ. 40-50 ಎಕರೆ ಗುಲಾಬಿ, 8-10 ಎಕರೆ ಸೇವಂತಿಗೆ ಸೇರಿದಂತೆ ತರಕಾರಿ ಬೆಳೆಗಳು ನಷ್ಟಕ್ಕೀಡಾಗಿವೆ. ಹೆನ್ನಾಗರ ಕೆರೆಯು ಜಿಗಣಿ ಕೈಗಾರಿಕಾ ಪ್ರದೇಶ, ಬೊಮ್ಮ ಸಂದ್ರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿದೆ. ಸುತ್ತಮುತ್ತಲೂ ಹಲವಾರು ಬಡಾವಣೆಗಳು ನಿರ್ಮಾಣವಾಗಿವೆ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣೆಯಾಗದೆ ಕೆರೆಗೆ ಹರಿಯುತ್ತಿರುವುದರಿಂದ ಕೆರೆ ನೀರು ಕಲುಷಿತವಾಗಿದೆ. ಕೆರೆ ತುಂಬಿದ್ದರೂ ಈ ನೀರು ಉಪಯೋಗಕ್ಕೆ ಬಾರದಂತಾಗಿದೆ. ತ್ಯಾಜ್ಯ ನೀರಿನ ದುರ್ವಾಸನೆಯಿಂದ ಕಾಯಿಲೆ ಬರುವಂ ತಾಗಿದೆ ಎಂಬುದು ರೈತರ
ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT