ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಪರಂಪರೆಯ ‘ಶಂಕರಹಳ್ಳ’

ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರಿಂದ ಶಂಕರಮೂರ್ತಿಗೆ ಪೂಜೆ
Last Updated 15 ಜನವರಿ 2021, 3:51 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿಗೆ ಸಮೀಪದ ತಮಿಳುನಾಡಿನ ದೇವರಬೆಟ್ಟದ ಬಳಿ ಇರುವ ಶಂಕನಹಳ್ಳದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ಪಾಲ್ಗೊಂಡು ಶಂಕರನಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಸಂಕ್ರಾಂತಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದಟ್ಟ ಕಾನನದಲ್ಲಿರುವ ಶಂಕರನಹಳ್ಳಕ್ಕೆ ವರ್ಷಕೊಮ್ಮೆ ಸಂಕ್ರಾಂತಿಯಂದು ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಆನೇಕಲ್‌–ಥಳೀ ರಸ್ತೆ ಗೋಪಸಂದ್ರದಿಂದ ದೇವರಬೆಟ್ಟದವರೆಗೂ ವಾಹನಗಳಲ್ಲಿ ತೆರಳಲು ರಸ್ತೆ ಇದೆ. ಭಕ್ತರು ದೇವರಬೆಟ್ಟದಲ್ಲಿ ರುದ್ರಮುನೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಕಾಡಿನಲ್ಲಿ ಎಂಟು ಕಿ.ಮೀ ದೂರ ನಡೆದು ಸಾಗಿದರೆ ಶಂಕರನಹಳ್ಳ ತಲುಪಬಹುದು. ಬೆಟ್ಟಗುಡ್ಡಗಳ ಮಧ್ಯೆ ಕಾಡುಹಾದಿಯಲ್ಲಿ ನಡೆದು ಸಾಗಿದರೆ ಪ್ರಕೃತಿ ಮಡಿಲಿನಲ್ಲಿ ಸುಂದರ ತಾಣ ಶಂಕರನಹಳ್ಳ ತಲುಪಿ ದೇವರ ದರ್ಶನ ಪಡೆಯಬಹುದು.

ಹಿನ್ನೆಲೆ: ಕಾಡಿನ ಮಧ್ಯದಲ್ಲಿರುವ ಶಂಕರನಹಳ್ಳಕ್ಕೆ ತನ್ನದೇ ಆದ ಪ್ರಾಚೀನ ಹಿನ್ನೆಲೆ ಇದೆ. ಸುಮಾರು 500 ವರ್ಷಗಳ ಹಿಂದೆ ಗುಮ್ಮಳಾಪುರ ಪ್ರಸಿದ್ಧ ಶರಣ ಕ್ಷೇತ್ರವಾಗಿತ್ತು. ಈ ಸಂದರ್ಭದಲ್ಲಿ ಗುಮ್ಮಳಾಪುರಕ್ಕೆ ಶಂಕರಪ್ಪ, ಬಂಕದಪ್ಪ ಎಂಬ ಇಬ್ಬರು ಶರಣರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶರಣರಿಗೂ, ಕೆಲವು ಗ್ರಾಮಸ್ಥರಿಗೂ ಜಗಳ ನಡೆದು ಬಂಕದಪ್ಪ ಹತನಾದ ಎನ್ನಲಾಗಿದೆ. ಜನರು ಊಟ ಸಹ ನೀಡದೇ ಶಂಕರಪ್ಪ ಉಪವಾಸ ಬೀಳುವಂತಾಯಿತು. ಗ್ರಾಮದ ಬೇಡನೊಬ್ಬನಿಗೆ ಕರುಣೆ ಬಂದು ಹೊಸ ಮಡಿಕೆಯಲ್ಲಿ ನೀರು ತಂದುಕೊಟ್ಟು ಆಗ ಶರಣ ಶಂಕರಪ್ಪ ನೀರು ಕುಡಿದು ಇಷ್ಟು ಮನೆಗಳಿದ್ದರೂ ಇವರ್ಯಾರು ಸಹ ನನ್ನ ನೆರವಿಗೆ ಬಂದಿಲ್ಲ. ಇವರು ನಾಶವಾಗಲಿ ಎಂದು ಶಾಪ ನೀಡಿ ಇಂತಹ ಪ್ರದೇಶದಲ್ಲಿ ಇರುವುದೇ ಬೇಡ ಎಂದು ಕಾಡಿನ ಹಾದಿ ಹಿಡಿದ ಎನ್ನುವುದು ಪ್ರತೀತಿ.

ಶಂಕರಪ್ಪ ಕಾಡಿನ ಹಾದಿ ಹಿಡಿದ ನಂತರ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತು. ಶಂಕರಪ್ಪನ ಶಾಪವೇ ಇರಬಹುದು ಎಂದು ಭಾವಿಸಿದ ಗ್ರಾಮದ ಮುಖಂಡರು ಗ್ರಾಮದಲ್ಲಿ ಸಭೆ ನಡೆಸಿ ಶಂಕರಪ್ಪ ಎಲ್ಲಿರುವರೋ ಎಂದು ತೀರ್ಮಾನಿಸಿದರು. ಅದರಂತೆ ಗ್ರಾಮದ ಗೂಳಿಯೊಂದಕ್ಕೆ ಹಾರಹಾಕಿ ಪೂಜೆ ಮಾಡಿ ಶಂಕರಪ್ಪ ಇರುವ ಸ್ಥಳ ತೋರಿಸು ಎಂದು ಪ್ರಾರ್ಥಿಸಿದರು. ಗೂಳಿಯು ಕಾಡಿನ ಹಾದಿಯಲ್ಲಿ ನುಗ್ಗಿ ಬೆಟ್ಟಗುಡ್ಡಗಳನ್ನು ದಾಟಿ ಶಂಕರನಹಳ್ಳದ ಬಳಿಯ ಬಂಡೆಯೊಂದಕ್ಕೆ ಕೊಂಬಿನಿಂದ ಗುದ್ದತ್ತ ನಿಂತಿತು. ಗ್ರಾಮಸ್ಥರು ನೋಡಿದಾಗ ಶಂಕರಪ್ಪ ಐಕ್ಯವಾದದ್ದು ಕಂಡು ಬಂದಿತು. ಈ ಸ್ಥಳವೇ ಶಂಕರನಹಳ್ಳವೆಂದು ಖ್ಯಾತಿಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT