ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ದೇಶಿ ಆಟ ಜ್ಞಾನಾರ್ಜನೆಗೆ ಸಹಕಾರಿ

ನ್ಯೂಶಾರದ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳಿಗೆ ಪರಿಚಯ ಕಾರ್ಯಕ್ರಮ
Last Updated 13 ಜುಲೈ 2019, 13:28 IST
ಅಕ್ಷರ ಗಾತ್ರ

ದೇವನಹಳ್ಳಿ: ಮಕ್ಕಳಲ್ಲಿ ಜ್ಞಾನಾರ್ಜನೆಗೆ ಪರಂಪರೆಯ ದೇಶಿ ಆಟಗಳು ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ ಹೇಳಿದರು.

ಇಲ್ಲಿನ ನ್ಯೂಶಾರದ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳಿಗೆ ದೇಶಿಯ ಆಟಗಳ ಪರಿಚಯ ಕುರಿತು ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜ್ಞಾನಾರ್ಜನೆಗೆ ಬರಿ ಮಾಹಿತಿ ನೀಡುವುದಕ್ಕಿಂತ ಆಟಗಳ ಪರಿಚಯ, ಕೌಶಲ, ತಂತ್ರಗಾರಿಕೆ ಬಗ್ಗೆ ಪ್ರಾಯೋಗಿಕವಾಗಿ ಮಕ್ಕಳಿಗೆ ಮನದಟ್ಟು ಮಾಡುವ ಕೆಲಸ ಶಿಕ್ಷಕರು ಮಾಡಬೇಕು. ಕಲಿಕೆ ಎಂಬುದು ಸರಳ ವಿಧಾನದಲ್ಲಿ ಒತ್ತಡ ಮತ್ತು ಹೊರೆಯಾಗದ ರೀತಿಯಲ್ಲಿ ಮಕ್ಕಳಲ್ಲಿ ಒಲವು ಬೆಳೆಸಬೇಕು ಎಂದು ಹೇಳಿದರು.

ದೇಶಿಯ ಆಟಗಳು ಮೂಲೆಗುಂಪಾಗುತ್ತಿವೆ, ದೇಶಿಯ ಆಟಗಳು ಮನರಂಜನೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಎಲ್ಲ ಶಾಲೆಗಳಲ್ಲಿ ಮಾಸಿಕ ಒಂದು ಶನಿವಾರ ಶಾಲೆಯಿಂದ ಹೊರಗಡೆ ಬಂದು ಪಠ್ಯೇತರ ಚಟುವಟಿಕೆ ಜೊತೆಗೆ ಹೊರಸಂಚಾರ, ಮೆಟ್ರಿಕ್ ಮೇಳದಂತಹ ರಂಜನಾತ್ಮಕ ಕಾರ್ಯಕ್ರಮದಲ್ಲಿ ಮಕ್ಕಳೆಲ್ಲರೂ ಸಾಮೂಹಿಕವಾಗಿ ಪಾಲ್ಗೊಳ್ಳುವುದರಿಂದ ಕಣ್ಣು, ಕಿವಿ, ಮೆದುಳು ಚುರುಕಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆ ಅಕ್ಷರದಾಸೋಹ ಮೇಲ್ವಿಚಾರಕ ರಿಯಾಜ್ ಮಾತನಾಡಿ, ಶಿಕ್ಷಣ ಇಲಾಖೆ ಸೋಮವಾರದಿಂದ ಶುಕ್ರವಾರದವರೆಗೆ ದೈನಂದಿನ ವೇಳಾಪಟ್ಟಿಯಂತೆ ಮಾತ್ರ ಮಕ್ಕಳು ಪುಸ್ತಕಗಳನ್ನು ತೆಗೆದುಕೊಂಡು ಬರಬೇಕು. ಪ್ರತಿ ಶನಿವಾರ ಬ್ಯಾಗ್ ರಹಿತವಾಗಿ ಮಕ್ಕಳು ಶಾಲೆಗೆ ಬರಬೇಕು, ಪೂರ್ಣ ದಿನ ಪಠ್ಯೇತರ ಚಟುವಟಿಕೆಗೆ ಮೀಸಲಾಗಬೇಕು. ದೇಶಿಯ ಆಟಗಳಿಂದ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ಸಾಧ್ಯ ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಪುಷ್ಪಾಂಜಲಿ ಮಾತನಾಡಿ, ದೇಶಿಯ ಅನೇಕ ಗ್ರಾಮೀಣ ಆಟಗಳ ಹೆಸರನ್ನು ಮರೆಯುತ್ತಿದ್ದೇವೆ. ಇದನ್ನರಿತು ಗೋಲಿ ಗಜಿಗದಾಟ, ಲಗೋರಿ, ಕಣ್ಣು ಮುಚ್ಚಾಲೆ, ಬುಗರಿ, ಹಾವು ಏಣಿ ಆಟ, ಮಡಿಕೆ ಕುಡಿಕೆ, ಕುಂಟೆಬಿಲ್ಲೆ, ರತ್ತೊರತ್ತೊ ರಾಯನ ಮಗಳೆ, ಚಿನ್ನದಾಂಡು, ಮರಕೋತಿ, ಅಳಗುಳಿಮನೆ ಆಟ, ಚೌಕಾಬಾರ, ನದಿ ದಡ, ಕುರಿತೋಳ, ಅಚ್ಚೆಕಲ್ಲು ಇಪ್ಪತ್ತುಕ್ಕೂ ಹೆಚ್ಚು ದೇಶಿಯ ಆಟಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಆಟದ ಮಹತ್ವದ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಸವಿತಾ ನಟರಾಜ್, ಕಾರ್ಯದರ್ಶಿ ವಿನಯ್, ಸಿ.ಆರ್.ಪಿ. ಗಜೇಂದ್ರ, ಶಿಕ್ಷಕರಾದ ಗುರುಪ್ರಸಾದ್, ವೆಂಕಟಾಚಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT