ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಮೇಕೆದಾಟು ಪಾದಯಾತ್ರೆ ಅನಿವಾರ್ಯ: ಶಾಸಕ ಶರತ್‌ ಬಚ್ಚೇಗೌಡ

ಮೇಕೆದಾಟು ಯೋಜನೆ ಜಾರಿ ಮಾಡಲಿ: ಶಾಸಕ ಶರತ್‌ ಬಚ್ಚೇಗೌಡ
Last Updated 5 ಜನವರಿ 2022, 4:55 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜನತೆಗೆ ಮೂಲಸೌಕರ್ಯಗಳಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ನೀರಾವರಿ ಯೋಜನೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ, ಮೇಕೆದಾಟು ಯೋಜನೆಯಿಂದ ನೀರು ತರಲಿಕ್ಕಾಗಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ’ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಮ್ಮ ನೀರು, ನಮ್ಮ ಹಕ್ಕು– ಮೇಕೆದಾಟಿಗೆ ಪಾದಯಾತ್ರೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಮೇಕೆದಾಟು ಯೋಜನೆಯಿಂದ ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿರುವ 88 ಟಿ.ಎಂ.ಸಿ.ನೀರನ್ನು ನಮಗೆ ಕೊಡಿ ಎನ್ನುವುದು ನಮ್ಮ ಹೋರಾಟವಾಗಿದೆ. ನಾವು ತಮಿಳುನಾಡಿನವರ ಪಾಲು ಕೇಳುತ್ತಿಲ್ಲ. ಪಾದಯಾತ್ರೆಯ ಮೂಲಕ ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ಸರ್ಕಾರವನ್ನು ಎಚ್ಚರಿಸುವಂತಹ ಕೆಲಸ ಮಾಡಲಿಕ್ಕೆ ಹೊರಟಿದ್ದೇವೆ’ ಎಂದರು.

‘ನಾವು ಜೀವನ ಪೂರ್ತಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಬೇಕಾ? ಯಾವಾಗಲೂ ಬೆಂಗಳೂರಿನ ತ್ಯಾಜ್ಯ ನೀರನ್ನೆ ಕುಡಿಯಬೇಕಾ? ನಮಗೆ ಶುದ್ಧ ಕುಡಿಯುವ ನೀರು ಬೇಡವೇ? ಬೆಂಗಳೂರು ಅಭಿವೃದ್ಧಿಯಲ್ಲಿ ಸಿಂಹಪಾಲು ಗ್ರಾಮಾಂತರದ್ದಾಗಿದೆ ಎನ್ನುವುದನ್ನು ಯಾರೂ ಮರೆಯಬಾರದು, ಕಾವೇರಿ ನೀರಿನ ಹಕ್ಕು ನಮಗೂ ಇದೆ’ ಎಂದರು.

‘ಬಿಜೆಪಿ ಸರ್ಕಾರ 40% ಸರ್ಕಾರ, ಬಿಟ್ ಕಾಯಿನ್ ದಂಧೆಯಲ್ಲಿ ಸಾಕಷ್ಟು ಹಣ ದರೋಡೆ ಮಾಡಿದ್ದಾರೆ. ಜಾತಿ, ಧರ್ಮಗಳನ್ನು ಒಡೆಯುವುದು ಅವರ ಕೆಲಸ, ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದು, ಒಂದೇ ಒಂದು ಗೋಶಾಲೆಯನ್ನು ತೆರೆಯಲಿಲ್ಲ. ಈಗ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲಿಕ್ಕೆ ಹೊರಟಿದ್ದಾರೆ’ ಎಂದರು.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಮಾತನಾಡಿ, ‘ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ, ಜನರ ಬದುಕು ಹಸನು ಮಾಡಬೇಕು ಎನ್ನುವ ಕನಿಷ್ಠ ಕಾಳಜಿಯು ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆಯಡಿಯಲ್ಲಿ ಕೆರೆಗಳಿಗೆ ನೀರು ಹರಿಸಿದ್ದೇವೆ. ಎತ್ತಿನಹೊಳೆ ಯೋಜನೆಯೂ ಸಾಕಷ್ಟು ಕಾಮಗಾರಿ ಮುಕ್ತಾಯವಾಗಿದೆ. ಬಿಜೆಪಿ ಸರ್ಕಾರ ಬಂದ ನಂತರ ಯೋಜನೆಗೆ ವೇಗ ಸಿಗಲಿಲ್ಲ, ಆದ್ದರಿಂದ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕಾದರೆ, ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಬೇಕು’ ಎಂದರು.

ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ, ‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಭಯ ಶುರುವಾಗಿದೆ. ಆ ಪಕ್ಷಗಳಿಗೆ ನಿಜವಾಗಿಯೂ ಜನರ ಬಗ್ಗೆ ಬದ್ಧತೆಯಿದ್ದರೆ ಪಾದಯಾತ್ರೆಗೆ ಸಹಕಾರ ನೀಡಲಿ’ ಎಂದರು.

ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ‘ಪಕ್ಷದ ಮುಖಂಡರು, ಕಾರ್ಯಕರ್ತರು, ಹೆಚ್ಚಿನ ಶಕ್ತಿ ತುಂಬಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲಿಕ್ಕಾಗಿ ಕೆಲಸ ಮಾಡಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ವಿ.ರಾಮಚಂದ್ರಪ್ಪ, ಉಪಾಧ್ಯಕ್ಷ ಶಾಂತ್ ಕುಮಾರ್, ರಂಗಣ್ಣ, ಮುಖಂಡರಾದ ಎಸ್.ಆರ್.ರವಿಕುಮಾರ್, ಬಿ.ಚೇತನ್ ಗೌಡ, ಎ.ಸಿ.ಶ್ರೀನಿವಾಸ್, ಎ.ಚಿನ್ನಪ್ಪ, ಅನಂತಕುಮಾರಿಚಿನ್ನಪ್ಪ, ಎಂ.ನಾರಾಯಣಸ್ವಾಮಿ, ಮುದುಗುರ್ಕಿ ನಾರಾಯಣಸ್ವಾಮಿ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT