ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಹೊಸಕೋಟೆ ಕ್ರೀಡಾಂಗಣ

Last Updated 28 ನವೆಂಬರ್ 2021, 14:02 IST
ಅಕ್ಷರ ಗಾತ್ರ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಪಟುಗಳು ಇರುವುದು ಹೊಸಕೋಟೆ ತಾಲ್ಲೂಕಿನಲ್ಲಿ. ಆದರೆ, ಇಲ್ಲಿನ ಕ್ರೀಡಾಂಗಣ ಮಾತ್ರ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಕ್ರೀಡಾಪಟುಗಳಿಗೆ ಬಹಳ ತೊಂದರೆಯಾಗಿದೆ.

ಜಿಲ್ಲೆಯ ನಾಲ್ಕು ತಾಲ್ಲೂಕಿನ ಪೈಕಿ 400 ಮೀಟರ್ ಟ್ರ್ಯಾಕ್‌ ಇರುವುದು ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮಾತ್ರ. ಅದಕ್ಕಾಗಿಯೇ ಈ ಮೊದಲು ಕ್ರೀಡಾಂಗಣವನ್ನು ಜಿಲ್ಲಾ ಕ್ರೀಡಾಂಗಣವೆಂದು ಗುರುತಿಸಿ ಸುತ್ತಲೂ ಫೆವಿಲಿಯನ್ ಸೇರಿದಂತೆ ಒಂದಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ಆದರೆ, ಅದರ ಸೂಕ್ತ ನಿರ್ವಹಣೆ ಇಲ್ಲದೆ ಈಗ ಕೇವಲ ಬಯಲಿನಂತೆ ಕಾಣಿಸುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಕ್ರೀಡಾಂಗಣಕ್ಕೆ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಕಡೆಗಳಿಂದಲೂ ಕ್ರೀಡಾಪಟುಗಳು ಬಂದು ಹೋಗಬಹುದಾಗಿದೆ. ಬಹಳ ವರ್ಷಗಳ ಮುಂಚೆ ಇದೇ ಕ್ರೀಡಾಂಗಣದಲ್ಲಿ ಹೊನಲು– ಬೆಳಕಿನ ರಾಷ್ಟ್ರಮಟ್ಟದ ಕೊಕ್ಕೋ ಪಂದ್ಯಾವಳಿ ಸಹ ನಡೆದಿದ್ದು, ಕ್ರೀಡಾಂಗಣವು ದೇಶದ ಗಮನ ಸೆಳೆದಿತ್ತು.

ಈಗಲೂ ಜಿಲ್ಲಾ ಹಾಗೂ ರಾಜ್ಯಮಟ್ಟದ ಕೆಲವು ಕ್ರೀಡಾಕೂಟಗಳು ಇದೇ ಕ್ರೀಡಾಂಗಣದಲ್ಲಿ ನಡೆಯುತ್ತವೆಯಾದರೂ ಬಂದ ಕ್ರೀಡಾಪಟುಗಳು ಯಾವುದೇ ಮೂಲಸೌಕರ್ಯವಿಲ್ಲದ ಬಗ್ಗೆ ನೊಂದುಕೊಂಡು ಹೋಗುತ್ತಾರೆ.

ಕ್ರೀಡಾಪಟುಗಳಿಗೆ ತಮ್ಮ ಬಟ್ಟೆ ಇಡಲು ಮತ್ತು ಬದಲಿಸಲು ಬೇಕಾದ ಡ್ರೆಸ್ಸಿಂಗ್ ಕೊಠಡಿಯ ವ್ಯವಸ್ಥೆಯಿಲ್ಲ. ಮಹಿಳಾ ಕ್ರೀಡಾಪಟುಗಳು ಬಟ್ಟೆ ಬದಲಿಸಲು ಪರದಾಡುವ ಪರಿಸ್ಥಿತಿಯಿದೆ. ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಇಲ್ಲಿನ ಸಿಬ್ಬಂದಿ ಹೊರಗಿನಿಂದ ನೀರು ತಂದರೆ ಮಾತ್ರ ಕ್ರೀಡಾಪಟುಗಳಿಗೆ ನೀರು ಸಿಗುತ್ತದೆ. ಕ್ರೀಡಾಕೂಟದ ಸಂದರ್ಭದಲ್ಲಿ ನೀರು ಸಿಗುತ್ತದೆಯಾದರೂ ನಿತ್ಯ ಅಭ್ಯಾಸ ಮಾಡಲು ಬರುವ ಕ್ರೀಡಾಪಟುಗಳಿಗೆ ಸಮಸ್ಯೆಯಾಗುತ್ತಿದೆ.

ಇನ್ನು ಶೌಚಾಲಯಗಳು ಇತ್ತೀಚೆಗೆ ಕಟ್ಟಿದ್ದಾರಾದರೂ ನೀರು ಪೂರೈಕೆ ವ್ಯವಸ್ಥೆ ಮಾಡಿಲ್ಲ. ನಗರಸಭೆಯಿಂದ ನೀರು ಬಿಟ್ಟಾಗ ಮಾತ್ರ ಶೌಚಾಲಯಕ್ಕೆ ನೀರು; ಇಲ್ಲದಿದ್ದರೆ ನೀರಿಲ್ಲದೆ ದುರ್ವಾಸನೆ ಬೀರುತ್ತವೆ.

ಕ್ರೀಡಾಂಗಣದ ವ್ಯವಸ್ಥೆಗಾಗಿಯೇ ಕೊರೆದಿರುವ ಕೊಳವೆಬಾವಿ ಕೆಟ್ಟು ಮೂರು ವರ್ಷಗಳಾದರೂ ಇನ್ನೂ ಅದನ್ನು ದುರಸ್ತಿಪಡಿಸಿಲ್ಲ. ರಾತ್ರಿ ಪಾಳಿಯಲ್ಲಿ ಇಲ್ಲಿ ಸಿಬ್ಬಂದಿ ಇರುತ್ತಾರಾದರೂ ಕತ್ತಲಾದ ಮೇಲೆ ಅನೈತಿಕ ಚಟುವಟಿಕೆಗಳು ನಡೆಯುತ್ತದೆ. ಸೂಕ್ತ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂಬ ಕ್ರೀಡಾಪಟುಗಳ ಬೇಡಿಕೆ ಈಡೇರಿಲ್ಲ.

ಕ್ರೀಡಾಂಗಣವನ್ನು ಸಾರ್ವಜನಿಕರು ಉಪಯೋಗಿಸಿದಾಗ ಅದಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ. ಅದರ ಮೊತ್ತ ₹ 2 ಸಾವಿರದಿಂದ ₹ 10 ಸಾವಿರದವರೆಗೂ ಆಗುತ್ತದೆ. ಆದರೆ, ಈ ಹಣವು ಕ್ರೀಡಾಂಗಣದ ಅಭಿವೃದ್ಧಿಗೆ ಉಪಯೋಗವಾಗದೆ ಜಿಲ್ಲಾ ಯುವಜನ ಸೇವಾ ಹಾಗೂ ಸಬಲಿಕರಣ ಇಲಾಖೆಗೆ ಹೋಗುತ್ತದೆ.

ಕ್ರೀಡಾಂಗಣದಲ್ಲಿರುವ ಟ್ರ್ಯಾಕ್‌ ಅನ್ನು ಯಾವುದೇ ರೀತಿಯಲ್ಲಿ ಅಭಿವೃದ್ಧಿಪಡಿಸಿಲ್ಲ. ಮಳೆಗಾಲದಲ್ಲಿ ಅದು ಕೆಸರಿನ ಗದ್ದೆಯಂತೆ ಕಾಣುತ್ತದೆ. ಮಳೆ ಬಂದರೆ ವಾರಗಟ್ಟಲೇ ಅಲ್ಲಿ ತರಬೇತಿ ಪಡೆಯುವುದು ಕಷ್ಟವಾಗುತ್ತದೆ. ಎತ್ತರ ಜಿಗಿತ ಮತ್ತು ಉದ್ದ ಜಿಗಿತಕ್ಕೆ ಮಾಡಿರುವ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಮಾಡಿಲ್ಲ. ಎಷ್ಟೋ ವರ್ಷಗಳ ಹಿಂದೆ ಹಾಕಿಸಿರುವ ಮರಳನ್ನು ಬದಲಾಯಿಸಿಲ್ಲ.

ಹೊಸ ಮರಳನ್ನು ಹಾಕಿಲ್ಲ. ಅಲ್ಲಿ ಅಭ್ಯಾಸ ಮಾಡುವವರ ಕಾಲುಗಳಿಗೆ ಗಾಯಗಳಾಗಿದ್ದು, ಅದನ್ನು ಇಲಾಖೆ ಗಮನಿಸಬೇಕಾಗಿದೆ. ಇನ್ನು ಸರ್ಕಾರದಿಂದ ನೇಮಕವಾಗಿರುವ ತರಬೇತುದಾರರು ಸರಿಯಾಗಿ ಇಲ್ಲಿಗೆ ಬರುತ್ತಿಲ್ಲ ಎಂಬುದು ಜನರ ದೂರು.

ಕ್ರೀಡಾಂಗಣದಲ್ಲಿ ಒಂದು ವ್ಯಾಯಾಮ ಶಾಲೆಯಿದೆ. ಅದನ್ನು ಈಗ ಖಾಸಗಿಯವರಿಗೆ ನಿರ್ವಹಣೆಗೆ ಕೊಟ್ಟಿದ್ದು ಅವರಿಂದ ತಿಂಗಳ ಬಾಡಿಗೆಯನ್ನು ವಸೂಲಿ ಮಾಡುತ್ತಾರಾದರೂ ಅಲ್ಲಿಯೂ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಅಲ್ಲಿಗೆ ಬರುವ ನಾಗರಿಕರು ಪರದಾಡುವಂತಾಗಿದೆ. ಅದಕ್ಕಾಗಿಯೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಇಲ್ಲಿ ಅಭ್ಯಾಸ ಮಾಡುವ ಕ್ರೀಡಾಪಟುಗಳು ರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶ ಹಾಗೂ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಬಹುದು ಎಂಬುದು ಜನರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT