ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ರಸ್ತೆ ದಾಟಲು ಜೀವದ ಹಂಗು ತೊರಯಬೇಕು

Published 27 ಮೇ 2024, 5:34 IST
Last Updated 27 ಮೇ 2024, 5:34 IST
ಅಕ್ಷರ ಗಾತ್ರ

ಹೊಸಕೋಟೆ: ಬೆಂಗಳೂರು‌–ಚನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ರಸ್ತೆ ಸಮೀಪ ಬರುವ ಗ್ರಾಮಗಳ ಗ್ರಾಮಸ್ಥರು ಪ್ರಾಣವನ್ನು ಅಂಗೈನಲ್ಲಿ ಇಟ್ಟುಕೊಂಡು ರಸ್ತೆ ದಾಟಬೇಕಿದೆ.

ಈ ರಸ್ತೆಯು ಆಂಧ್ರಪ್ರದೇಶದ ಪ್ರಮುಖ ನಗರ ಮೂಲಕ ಹಾದುಹೋಗಿ, ಚನ್ನೈ ತಲುಪುತ್ತದೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ವಾಹನಗಳ ವೇಗ ದುಪ್ಪಟಾಗಿರುತ್ತದೆ. ಹೆದ್ದಾರಿಯ ಅಂಚಿನಲ್ಲಿರುವ ಗ್ರಾಮಗಳ ಗ್ರಾಮಸ್ಥರು ರಸ್ತೆ ದಾಟಬೇಕಾದ ಜೀವದ ಅಂಗು ತೊರಬೇಕಿದೆ. ರಸ್ತೆ ದಾಟಲು ಹೋಗಿ ಹಲವು ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ಗಾಯಗೊಂಡು, ಶಾಶ್ವತ ಅಂಗ ಕಳೆದುಕೊಂಡಿದ್ದಾರೆ.

ನಗರದ ಗೌತಮ ನಗರದಿಂದ ಆರಂಭ ಆಗುವ ಕ್ರಾಸಿಂಗ್ ಸಮಸ್ಯೆ ತಾಲ್ಲೂಕಿನ ಮುಗಬಾಳ ಗ್ರಾಮದವರೆಗೂ ಮುಂದುವರೆಯುತ್ತದೆ. ರಸ್ತೆಯಲ್ಲಿ ಬರುವ ದಂಡುಪಾಳ್ಯ, ಕೊಳತೂರು, ಹಲಸಹಳ್ಳಿ, ಲಾಲ್‌ಬಾಗ್ ದಾಸರಹಳ್ಳಿ, ಗೊಟ್ಟಿಪುರ, ಅತ್ತಿವಟ್ಟ, ನಿಡಗಟ್ಟ, ಅಟ್ಟೂರು, ಚನ್ನಾಪುರ, ವಳಗೆರೆಪುರ, ಮೈಲಾಪುರ, ಹೊಸಹಳ್ಳಿ, ಪೂಜಾರಾಮನಹಳ್ಳಿ, ಚಿಕ್ಕನಹಳ್ಳಿ ಕ್ರಾಸ್ ಸೇರಿದಂತೆ ಇನ್ನೂ ಹಲವು ಹಳ್ಳಿಗಳ‌ ಗ್ರಾಮಸ್ಥರು ರಸ್ತೆ ದಾಟಲು ವ್ಯವಸ್ಥೆಯೇ ಇಲ್ಲ. ಬದಲಿ ಮಾರ್ಗವು ಇಲ್ಲದೆ ಸ್ಥಳೀಯರು ಪರದಾಡುತ್ತಿದ್ದಾರೆ.

ಹೀಗಾಗಿ ಸ್ಕೈವಾಕ್‌ ಮತ್ತು ಕೆಳಸೇತುವೆ ನಿರ್ಮಿಸಬೇಕೆಂಬ ಸ್ಥಳೀಯ ಬೇಡಿಕೆಯಾಗಿದೆ. ಆದರೆ ಇದುವರೆಗೆ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ.

ಹೆದ್ದಾರಿಗೆ ಸರ್ವೀಸ್ ರಸ್ತೆಯೇ ಇಲ್ಲ: ಹೆದ್ದಾರಿಗಳಿಗೆ ಸರ್ವೀಸ್‌ ರಸ್ತೆ ನಿರ್ಮಿಸಬೇಕೆಂಬುದು ನಿಯಮ. ಆದರೆ ಈ ರಾಷ್ಟ್ರೀಯ ಹೆದ್ದಾರಿಗೆ ಸರ್ವೀಸ್‌ ರಸ್ತೆ ನಿರ್ಮಿಸಿಲ್ಲ. ಇದರಿಂದ ಸ್ಥಳೀಯರು ಓಡಾಡಲು ಕಷ್ಟವಾಗುತ್ತಿದೆ.

ಬೆಂಗಳೂರು–ಚನ್ನೈ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಹೊಸಕೋಟೆ ಬಿಟ್ಟ ನಂತರ ಮುಗಬಾಳ, ತಾವರೆಕೆರೆ ಮೇಲ್ಸೇತುವೆ ಹೊರತುಪಡಿಸಿ ಎಲ್ಲಿಯೂ ಸರ್ವೀಸ್ ರಸ್ತೆ ಕಾಣುವುದಿಲ್ಲ. ಈ ಭಾಗದ ಹಳ್ಳಿಗಳ ಗ್ರಾಮಸ್ತರು ದಿನನಿತ್ಯದ ಚಟುವಟಿಕೆಗಳಿಗೆ ಓಡಾಡಲು ಕಷ್ಟ ಆಗುತ್ತಿದೆ. ಹೆದ್ದಾರಿಯ ವಾಹನ ದಟ್ಟಣೆ ಉಂಟಾದರೆ ಗಂಟೆಗಟ್ಟಲೆ ನಿಲ್ಲಬೇಕಿದೆ.

ಗೊಟ್ಟಿಪುರ, ಹೊಸಹಳ್ಳಿ ಗ್ರಾಮಗಳ ಬಳಿಯಲ್ಲಿ ಗ್ರಾಮಸ್ಥರೇ ರಸ್ತೆ ವಿಭಜಕವನ್ನು ಹೊಡೆದು ದಾರಿ ಮಾಡಿಕೊಂಡಿದ್ದಾರೆ. ಮೈಲಾಪುರ ಮತ್ತು ಹಲಸಹಳ್ಳಿ ಬಿಟ್ಟರೆ ಉಳಿದ ಗ್ರಾಮಗಳ ಬಳಿ‌ ಸಿಗ್ನಲ್‌ಲೈಟ್ ಅಳವಡಿಸಿಲ್ಲ. ಇವೆಲ್ಲವೂ ಸಮಸ್ಯೆಯ ಹೆಚ್ಚಾಗಲು ಕಾರಣವಾಗಿದೆ.

ಗೊಟ್ಟಿಪುರದ ಬಳಿ ಗ್ರಾಮಸ್ಥರೇ ಮಾಡಿಕೊಂಡಿರುವ ದಾರಿ
ಗೊಟ್ಟಿಪುರದ ಬಳಿ ಗ್ರಾಮಸ್ಥರೇ ಮಾಡಿಕೊಂಡಿರುವ ದಾರಿ
ಮೈಲಾಪು ಹೊಸಹಳ್ಳಿ ಗ್ರಾಮಗಳ ಬಳಿ ರಸ್ತೆ ದಾಟುವ ವೇಳೆ ಹಲವು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ಪಾದಚಾರಿಗಳಿಗೆ ಅನುಕೂಲವಾಗುವಂತೆ ಸ್ಕೈವಾಕ್‌ ವ್ಯವಸ್ಥೆ ಮಾಡಿಕೊಡಬೇಕು. ಅಂಡರ್‌ಪಾಸ್ ನಿರ್ಮಿಸಬೇಕು.
ವೆಂಕಟೇಶ್‌ ಹೊಸಹಳ್ಳಿ
ಹೆದ್ದಾರಿ ಅಂಚಿನಲ್ಲಿರುವ ಗ್ರಾಮಗಳ ವಾಹನ ಸವಾರರು ಪ್ರತಿ ದಿನ ಪರದಾಡುವಂತಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ನೀಡಿ
ಮುನಿಯಪ್ಪ ಮಾಜಿ ಗ್ರಾ.ಮ ಪಂ ಸದಸ್ಯ

ವಿದ್ಯಾರ್ಥಿಗಳ ಪರದಾಟ

ಶಾಲಾ–ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಇದೇ ಹೆದ್ದಾರಿಯನ್ನು ದಾಟಬೇಕು. ವಾಹನ ಅತಿವೇಗದಲ್ಲಿ ಸಾಗುವುದರಿಂದ ಮಕ್ಕಳು ಪರದಾಟಬೇಕಿದೆ. ರಸ್ತೆ ದಾಟಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಕೆಲವೊಮ್ಮೆ ಪೋಷಕರು ಮಕ್ಕಳೊಂದಿಗೆ ಬಂದು ರಸ್ತೆ ದಾಟಿಸಬೇಕು. ಕೋಲಾರ ರಸ್ತೆಯಲ್ಲಿ ಬರುವ ಗ್ರಾಮಗಳ ಜನರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಸ್ತೆ ದಾಟಲು ಸ್ಕೈವಾಕ್‌ ಮತ್ತು ಕೇಳಸೇತುವೆ ನಿರ್ಮಾಣ ಮಾಡಬೇಕು. ಈ ಮೂಲಕ ರಸ್ತೆ ದಾಟುವ ವೇಳೆ ಆಗಬಹುದಾದ ಅನಾಹುತ ತಪ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪ್ರತಿವರ್ಷ ಐವರ ಬಲಿ

ಹಳೆ ಮದ್ರಾಸ್ ರಸ್ತೆ ಆಗಿರುವುದರಿಂದ ವಾಹನ ದಟ್ಟಣೆ ಪ್ರತಿನಿತ್ಯ ಇರುತ್ತದೆ. ಶನಿವಾರ ಭಾನುವಾರ ಮತ್ತು ರಜಾ ದಿನಗಳಲ್ಲಿಯಂತೂ ಈ ರಸ್ತೆಯಲ್ಲಿ ವಾಹನಗಳು ಗಿಜಿಗುಡುತ್ತಿರುತ್ತವೆ. ಪ್ರತಿ ವರ್ಷ ಮೈಲಾಪುರ ಗೇಡ್ ಒಂದರಲ್ಲಿ ಕನಿಷ್ಟ ನಾಲ್ಕರಿಂದ ಐದು ಜನ ರಸ್ತೆ ದಾಟುವಾಗ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿ ಹಳ್ಳಿಯ ಬಳಿಯೂ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಅದಕ್ಕೂ ಮುಂಚೆ ತಾತ್ಕಾಲಿಕವಾಗಿ ಸ್ಕೈವಾಕ್‌ ವ್ಯವಸ್ಥೆ ಆಗಬೇಕಿದೆ. ಅಶ್ವತ್‌ಕುಮಾರ್ ಮೈಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT