ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಮುಚ್ಚಬಾರದು: ಸಂಸದ ಸುರೇಶ್

Last Updated 3 ಏಪ್ರಿಲ್ 2020, 15:30 IST
ಅಕ್ಷರ ಗಾತ್ರ

ಆನೇಕಲ್: ‘ತಾಲ್ಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಕಾರ್ಯನಿರ್ವಹಿಸಬೇಕು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗತ್ಯ ಸೇವೆಯಾಗಿರುವ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಬಾಗಿಲು ಮುಚ್ಚಬಾರದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗಬೇಕು’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ, ಕಂದಾಯ, ತಾಲ್ಲೂಕು ಪಂಚಾಯಿತಿ ಮತ್ತು ಪೊಲೀಸ್‌ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳ ಜಂಟಿ ತಂಡವು ತಾಲ್ಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸಿ ಮುಚ್ಚಿದಲ್ಲಿ ತೆರೆಯಲು ಸೂಚನೆ ನೀಡಬೇಕು. ಇಲ್ಲವಾದಲ್ಲಿ ಆಸ್ಪತ್ರೆಗಳ ಲೈಸೆನ್ಸ್‌ ರದ್ದು ಮಾಡಲು ಶಿಫಾರಸು ಮಾಡುವಂತೆ ತಿಳಿಸಿದರು.

‘ಕೊರೊನಾ ವೈರಸ್‌ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಸಮನ್ವಯತೆಯ ಕೊರತೆ ಉಂಟಾಗಬಾರದು. ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬಾರದು. ಎಪಿಎಂಸಿ ಮಾರುಕಟ್ಟೆಗಳಲ್ಲಿ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ರೈತರು ಧೃತಿಗೆಡಬಾರದು’ ಎಂದರು.

‘ಆನೇಕಲ್‌ ತಾಲ್ಲೂಕಿನಲ್ಲಿ ಒಟ್ಟು 110 ಮಂದಿಗೆ ಹೋಂ ಕ್ವಾರೆಂಟೈನ್‌ ಮಾಡಲಾಗಿತ್ತು. ಇಬ್ಬರು ಹೊರತುಪಡಿಸಿ ಉಳಿದ ಎಲ್ಲರ ಕ್ವಾರೈಂಟನ್‌ ಅವಧಿ ಮುಗಿದಿದೆ. ಆನೇಕಲ್‌ ತಾಲ್ಲೂಕು ಗಡಿಭಾಗವಾಗಿದೆ. ವಿವಿಧೆಡೆಯಿಂದ ವಲಸೆ ಬರುವವರು ಹೆಚ್ಚಾಗಿದ್ದಾರೆ. ಹಾಗಾಗಿ ಇದೊಂದು ಸೂಕ್ಷ್ಮಪ್ರದೇಶ. ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಿ ಕೊರೊನಾ ವೈರಸ್‌ ಸೋಂಕು ತಡೆಯಲು ಶ್ರಮಿಸಬೇಕು’ ಎಂದರು.

‘ಆನೇಕಲ್‌ ತಾಲ್ಲೂಕಿನಲ್ಲಿ 2,400 ಮಂದಿಗೆ ಆಹಾರ ನೀಡುವ ಅವಶ್ಯಕತೆಯಿದೆ ಎಂದು ಗುರುತಿಸಲಾಗಿದೆ. ಇವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಹಾರ ಪೂರೈಸಲು ಸಂಘ ಸಂಸ್ಥೆಗಳು, ತಾಲ್ಲೂಕು ಆಡಳಿತ ಮತ್ತು ಶಾಸಕರು ಕ್ರಮ ಕೈಗೊಂಡಿದ್ದಾರೆ. ಲಾಕ್‌ಡೌನ್‌ ಅವಧಿ ಮುಗಿಯುವವರೆಗೂ ಸುಗಮವಾಗಿ ನಿಭಾಯಿಸುವಂತೆ’ ತಿಳಿಸಿದರು.

‘ಎರಡು ತಿಂಗಳ ಪಡಿತರ ನೀಡಲು ಎರಡು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಗೋಧಿಯನ್ನು ಮಾಲೂರು ಗೋಡನ್‌ನಿಂದ ತರಿಸಲಾಗುತ್ತಿದೆ. ಹಾಗಾಗಿ ಎರಡು ದಿನಗಳಲ್ಲಿ ವಿತರಣೆಗೆ ಸಿದ್ದಪಡಿಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಪಿಎಲ್‌ ಕಾರ್ಡ್‌ ಅರ್ಹರಿದ್ದಲ್ಲಿ ತಾತ್ಕಲಿಕ ಬಿಪಿಎಲ್‌ ಕಾರ್ಡ್‌ ನೀಡಿ ಆಹಾರ ಪೂರೈಕೆ ಮಾಡುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು ವೈದ್ಯಾಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬೇರೆ ಇಲಾಖೆಗಳೊಂದಿಗೆ ಸಮನ್ವಯವಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಂಸದರು ತಾಲ್ಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಬಿ.ಶಿವಣ್ಣ ಮಾತನಾಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಾರ್ಯಪಡೆಗಳ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಸೂಚನೆ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಅವಶ್ಯಕತೆಯಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್‌ ಸಿ.ಮಹಾದೇವಯ್ಯ, ಡಿವೈಎಸ್ಪಿ ನಂಜುಂಡೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ, ಪುರಸಭಾ ಸದಸ್ಯರಾದ ಎನ್‌.ಎಸ್‌.ಪದ್ಮನಾಭ್‌, ಮುನಾವರ್‌, ರವಿಚೇತನ್‌, ಕೆ.ಶ್ರೀನಿವಾಸ್‌, ಮಹಾಂತೇಶ್‌, ರಾಜಪ್ಪ, ರವಿ, ಟೌನ್‌ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್‌, ಮುಖಂಡರಾದ ಆರ್‌.ಕೆ.ರಮೇಶ್, ದೊಡ್ಡಹಾಗಡೆ ಹರೀಶ್‌ಗೌಡ, ವಿನಯ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT