ಶನಿವಾರ, ಆಗಸ್ಟ್ 24, 2019
28 °C

34 ಹೋರಿಗಳ ಅಕ್ರಮ ಸಾಗಾಟ; ನಾಲ್ವರ ಬಂಧನ

Published:
Updated:
Prajavani

ದೇವನಹಳ್ಳಿ: ಹೋರಿಗಳ ಅಕ್ರಮ ಸಾಗಾಟ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 34 ಹೋರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 

ದೇವನಹಳ್ಳಿ ನಗರ ಮತ್ತು ಚಿಕ್ಕಬಳ್ಳಾಪುರ ನಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಹೋರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಒಂದನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಪೊಲೀಸ್ ಇನ್‌ಸ್ಪೆಕ್ಟರ್‌ ಸಿದ್ದರಾಜು, ‘ಅನಾಮಧೇಯ ವ್ಯಕ್ತಿ ಕರೆಯ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 7ರ ರಸ್ತೆ ರಾಣಿ ಕ್ರಾಸ್ ಬಳಿ ತಪಾಸಣೆ ನಡೆಸಿದಾಗ ಲಾರಿಯಲ್ಲಿ ಸಾಗಿಸುತ್ತಿದ್ದ 20 ದೇಸಿ ನಾಟಿ ಹೋರಿಗಳು ಕಂಡುಬಂದವು. ಅದರಲ್ಲಿ ಮಾಲೀಕ ಮುನ್ವಾನ್ ಪಾಷಾ ಮತ್ತು ಚಾಲಕ ಅಮೀರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತೆಲಂಗಾಣ ರಾಜ್ಯದ ಘಟವಾಲ ಜಿಲ್ಲೆಯಿಂದ ಬೆಂಗಳೂರು ಕಸಾಯಿಖಾನೆಗೆ ಜಾನುವಾರು ಸಾಗಾಣಿಕೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಯಾವುದೇ ಅಧಿಕೃತ ದಾಖಲೆ ಇಲ್ಲದ ಪರಿಣಾಮ ಪ್ರಕರಣ ದಾಖಲಿಸಿ ದೇವನಹಳ್ಳಿ ನಗರದ ಕೋಡಿಮಂಚೇನಹಳ್ಳಿಯ ಗೋಶಾಲೆಗೆ ಹೋರಿಗಳನ್ನು ಬಿಡಲಾಗಿದೆ’ ಎಂದು ಹೇಳಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ನಂದಿ ಗಿರಿಧಾಮ ಪೊಲೀಸ್ ಠಾಣೆ ಎ.ಎಸ್.ಐ.ರಾಮಾಚಾರಿ, ‘ರಾಷ್ಟ್ರೀಯ ಹೆದ್ದಾರಿ 7ರ ಚದಲಪುರ ಗೇಟ್ ಬಳಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಬೆಳಿಗ್ಗೆ ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದ 15 ಕಂದು ಬಣ್ಣದ ದಷ್ಟಪುಷ್ಟವಾದ ಹೋರಿಗಳು ಕಂಡುಬಂದವು. ಒಂದು ಹೋರಿ ವಾಹನದಲ್ಲೇ ಮೃತಪಟ್ಟಿತ್ತು. ಆರೋಪಿಗಳಾದ ಕ್ಯಾಂಟರ್ ಮಾಲೀಕ ಹಾಗೂ ಚಾಲಕ ಶೇಕ್ ಜಹಾಂಗೀರ್ ಮತ್ತು ಕ್ಲೀನರ್ ಜಬ್ಬಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಜಹಿರಾಬಾದ್ ನಿಂದ ಬೆಂಗಳೂರಿನ ಕಸಾಯಿಖಾನೆಗೆ ಸಾಗಾಣಿಕೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದು ಯಾವುದೇ ಅಧಿಕೃತ ಪರವಾನಗಿ ಇರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಹೋರಿಗಳನ್ನು ದೇವನಹಳ್ಳಿ ಬಳಿಯ ಗೋಶಾಲೆಗೆ ಬಿಡಲಾಗಿದೆ’ ಎಂದು ಹೇಳಿದರು.

Post Comments (+)