ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ಇಂದಿರಾ ಕ್ಯಾಂಟೀನ್

ಕುಂಟುತ್ತಾ ಸಾಗಿದೆ ಕಾಮಗಾರಿ, ತ್ವರಿತ ಕೆಲಸಕ್ಕೆ ಸ್ಥಳೀಯರ ಒತ್ತಾಯ
Last Updated 20 ಜೂನ್ 2018, 6:26 IST
ಅಕ್ಷರ ಗಾತ್ರ

ದೇವನಹಳ್ಳಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆ ಸ್ಥಳೀಯವಾಗಿ ನನೆಗುದಿಗೆ ಬಿದ್ದಿದ್ದು ಇದುವರೆವಿಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಚುನಾವಣೆಗೆ ಕೆಲವು ತಿಂಗಳ ಮೊದಲೇ ಕ್ಯಾಂಟೀನ್ ಗಳು ಮೊದಲ ಬಾರಿಗೆ ಬೆಂಗಳೂರು ನಗರದ ಆಯಕಟ್ಟಿನ ಪ್ರದೇಶದಲ್ಲಿ ಆರಂಭಗೊಂಡಿದ್ದವು. ಇದರ ಯಶಸ್ಸನ್ನು ಅರಿತ ಅಂದಿನ ಮುಖ್ಯಮಂತ್ರಿ, ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಆರಂಭಿಸಲು ಜಿಲ್ಲಾಧಿಕಾರಿಗೆ ಮತ್ತು ಪೌರಾಡಳಿತ ಇಲಾಖೆಗೆ ವಹಿಸಲಾಗಿತ್ತು. ತ್ವರಿತವಾಗಿ ಇವುಗಳನ್ನು ಆರಂಭಿಸಲು ಆದೇಶ ನೀಡಲಾಗಿತ್ತು.

ಅದರನ್ವಯ ತಾಲ್ಲೂಕು ಕೇಂದ್ರದಲ್ಲಿ ಜಿಲ್ಲಾಡಳಿತ ಮತ್ತು ಪುರಸಭೆ ಸಹಭಾಗಿತ್ವದಲ್ಲಿ ಗುದ್ದಲಿ ಪೂಜೆ ನಡೆಸಲಾಗಿದ್ದು ಕಾಮಗಾರಿ ಈಗ ಶೇ 25 ರಷ್ಟು ಮಾತ್ರ ಆಗಿದೆ ಎಂಬುದು ಸ್ಥಳೀಯರ ದೂರು.

ಪ್ರಸ್ತುತ ಕ್ಯಾಂಟೀನ್ ಗೆ ಗುರುತಿಸಿರುವ ಜಾಗದಲ್ಲಿ ತರಕಾರಿ ಮತ್ತು ಹೂವು ಮಾರಾಟಕ್ಕಾಗಿ ನಿತ್ಯ ವಹಿವಾಟು ನಡೆಸಲು ಲಾಟರಿ ಮೂಲಕ ಪುರಸಭೆ ಅಧಿಕಾರಿಗಳು ಅಂಗಡಿ ಜಾಗ ಗುರುತಿಸಿ ಕೊಟ್ಟಿದ್ದರು. ಗ್ರಾಹಕರ ಕೊರತೆ ನೆಪವೊಡ್ಡಿ ಕೆಲ ಅಂಗಡಿಗಳ ಮಾಲೀಕರು ಬೇರೆ ಕಡೆ ಸ್ಥಳಾಂತರಗೊಂಡಿದ್ದರು. ಹತ್ತಾರು ಹೂವು ಮಾರಾಟಗಾರರು ಅಲ್ಲೇ ವಹಿವಾಟುವಿನಲ್ಲಿ ತೊಡಗಿಸಿಕೊಂಡವರನ್ನು ಪುರಸಭೆ ಅಧಿಕಾರಿಗಳು ಸ್ಥಳಾಂತರ ಮಾಡಿಸಿ ಕ್ಯಾಂಟೀನ್ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಪರಿಸ್ಥಿತಿ ಕಂಡು ಆರ್‌ಟಿಇ ಕಾರ್ಯಕರ್ತ ಆಂಜಿನಪ್ಪ, ‘ಇಂದಿರಾ ಕ್ಯಾಂಟೀನ್ ಇನ್ನೂ ಇಲ್ಲಿ ಆರಂಭವಾಗಿಲ್ಲ. ಇಲ್ಲಿದ್ದ ವ್ಯಾಪಾರಿಗಳು ಫುಟ್ ಪಾತ್ ಮೇಲೆ ಇದ್ದಾರೆ. ಇದು
ಸರ್ಕಾರದ ಯೋಜನೆಗಳ ದುಸ್ಥಿತಿ’ ಎನ್ನುತ್ತಾರೆ.

‘ನಮ್ಮದೊಂದು ಅಲೆಮಾರಿ ಜೀವನವಾಗಿದೆ, ಶ್ರೀ ವೇಣುಗೋಪಾಲಸ್ವಾಮಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಹೊಸ ಬಸ್ ನಿಲ್ದಾಣದ ರಸ್ತೆ ಅಕ್ಕಪಕ್ಕ ತರಕಾರಿ ಹೂವು ಅಂಗಡಿಗಳಿದ್ದವು. ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿ ಈಗಿರುವ ಕ್ಯಾಂಟೀನ್ ಜಾಗದಲ್ಲಿ ವಹಿವಾಟು ನಡೆಸಿ ಎಂದರು. ಮತ್ತೆ ಕ್ಯಾಂಟೀನ್ ಆರಂಭಿಸಬೇಕು ಎಂದು ಅಂಗಡಿಗಳನ್ನು ಖಾಲಿ ಮಾಡಿಸಿದ್ದಾರೆ. ಮತ್ತೆ ರಸ್ತೆ ಬದಿಯಲ್ಲಿ ಕಾಯಂ ಆಗಿ ಎಲ್ಲಿಯಾದರೂ ಒಂದು ಕಡೆ ಜಾಗ ನೀಡಿಲ್ಲ’ ಎಂಬುದು ಸ್ಥಳೀಯ ರಾಜಣ್ಣ ಅವರ ಆರೋಪ.

ಸರ್ಕಾರದಿಂದ ₹ 62 ಲಕ್ಷ, ಪುರಸಭೆ ವತಿಯಿಂದ ₹ 11.5 ಲಕ್ಷ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿ ಕ್ಯಾಂಟೀನ್ ಆರಂಭಕ್ಕೆ ಅಡಿಪಾಯ ಹಾಕಲಾಗಿದೆ. ಇದ್ಕಾಗಿ ಒಂದು ಕೊಳವೆಬಾವಿ ಕೊರೆಯಿಸಲಾಗಿದೆ. ಹಣ ಸಂಪೂರ್ಣ ಬಿಡುಗಡೆಯಾಗಿಲ್ಲ. ಹಿರಿಯ ಅಧಿಕಾರಿಗಳ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂಬುದಾಗಿ ಪುರಸಭೆ ಅಧ್ಯಕ್ಷ ಎಂ.ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT