ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಕಡಿವಾಣಕ್ಕೆ ಒತ್ತಾಯ

Last Updated 22 ಏಪ್ರಿಲ್ 2021, 7:03 IST
ಅಕ್ಷರ ಗಾತ್ರ

ಆನೇಕಲ್: ‘ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರ ಕೆಲಸಗಳು ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆನೇಕಲ್‌ನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಒಕ್ಕೂಟದ ಸಿ.ರಾವಣ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶೇ 22.7ರಷ್ಟು ಅನುದಾನ ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಅನುದಾನದಲ್ಲಿ ದುರುಪಯೋಗವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದರು.

‘ಕಂದಾಯ, ಶಿಕ್ಷಣ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 15-20 ವರ್ಷ ಆನೇಕಲ್‌ ತಾಲ್ಲೂಕಿನಲ್ಲಿಯೇ ಇರುವ ನೌಕರರನ್ನು ವರ್ಗಾವಣೆ ಮಾಡಬೇಕು. ಹಲವು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿರುವುದರಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಆನೇಕಲ್‌ ತಾಲ್ಲೂಕಿನ ಅಗಸೆ ತಿಮ್ಮನಹಳ್ಳಿಯ ಸರ್ವೆ ನಂ. 5ರಲ್ಲಿ 20 ಎಕರೆ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ಜಮೀನನ್ನು ಖಾಸಗಿ ಡೆವಲಪರ್‌ಗಳು ದೌರ್ಜನ್ಯದಿಂದ ವಶಪಡಿಸಿಕೊಂಡಿದ್ದಾರೆ. ಇದನ್ನು ಬಿಡಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಮುಖಂಡ ವೆಂಕಟೇಶಮೂರ್ತಿ ಮಾತನಾಡಿ, ‘ತಾಲ್ಲೂಕಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಆನೇಕಲ್‌ ತಾಲ್ಲೂಕಿನ ಪೊಲೀಸ್ ಠಾಣೆಗಳಲ್ಲಿ ದಲಿತರ ಕುಂದು ಕೊರತೆಗಳ ಸಭೆಯು ಕಾಟಾಚಾರಕ್ಕಾಗಿ ನಡೆಯುತ್ತಿವೆ. ಈ ಸಭೆಗಳು ಅರ್ಥಪೂರ್ಣ ಸಭೆಗಳಾಗಬೇಕು. ದಲಿತರ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಬೇಕು. ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೇ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.

‘ಆನೇಕಲ್‌ನಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿ ಸ್ಥಾಪನೆಯಾಗಬೇಕು. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ಪಾಸ್‌ಗಳಿಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿ ಆನೇಕಲ್‌ನಲ್ಲಿಯೇ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು. ನಿವೃತ್ತ ತಹಶೀಲ್ದಾರ್‌ ಸಿ.ಮಹಾದೇವಯ್ಯ ಅವರ ಅವಧಿಯಲ್ಲಿ ಅಕ್ರಮವಾಗಿ ಮಾಡಿರುವ ಆದೇಶಗಳನ್ನು ರದ್ದುಪಡಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಾಡರಹಳ್ಳಿ ಲೋಕೇಶ್ ಮಾತನಾಡಿ, ‘ಭೂಮಾಪನ ಇಲಾಖೆಯಲ್ಲಿ ಬಡವರ ಕೆಲಸಗಳು ಆಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾಯಂ ಉದ್ಯೋಗಿಗಳಿಲ್ಲ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಸುರೇಶ್ ಪೋತಾ, ಅರೇಹಳ್ಳಿ ಅಶ್ವಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT