ಮಂಗಳವಾರ, ಮಾರ್ಚ್ 21, 2023
20 °C

ಹಲ್ಲೆ: ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ದೇವರ ಪ್ರಸಾದಕ್ಕೆಂದು ಹೋದ ಪರಿಶಿಷ್ಟ ಜಾತಿಯ ಬಾಲಕನ ಕುಟುಂಬಸ್ಥರ ಮೇಲೆ ವ್ಯವಸ್ಥಿತವಾಗಿ ನಡೆಸಿದ ಹಲ್ಲೆಯನ್ನು ಇಡೀ ಮಾನವ ಸಮಾಜ ಕಠೋರವಾಗಿ ಖಂಡಿಸಬೇಕಿದೆ.  ಪೊಲೀಸರು ದೌರ್ಜನ್ಯಕ್ಕೆ ಒಳಗಾಗಿರುವವರಿಗೆ ರಕ್ಷಣೆ ನೀಡಬೇಕು ಎಂದು ಪ್ರಜಾ ವಿಮೋಚನಾ ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜನಪ್ಪ ಒತ್ತಾಯಿಸಿದರು.

ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

ರಾಮನಾಥಪುರ ಗ್ರಾಮದ ಅರುಣಾ ಮತ್ತು ಕುಟುಂಬದವರ ಮೇಲೆ ನಡೆದ ದೌರ್ಜನ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಹಲ್ಲೆಕೋರರು, ಅವರಿಗೆ ಕುಮ್ಮಕ್ಕು ನೀಡಿರುವವರನ್ನು ಕೂಡಲೇ ಬಂಧಿಸಬೇಕು. ಕಾನೂನಿನಡಿ ಶಿಕ್ಷೆಗೊಳಪಡಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಮತ್ತೆ ಇನ್ಯಾವುದೇ ಗ್ರಾಮದಲ್ಲಿ ಈ ತರಹದ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು. ಪೊಲೀಸರು ಪರಿಶಿಷ್ಟ ಜಾತಿಯವರಿಗೆ ರಕ್ಷಣೆ ನೀಡಬೇಕು. ಆರೋಪಿಗಳನ್ನು ಬಂಧಿಸಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು.

ವಿಜಯಪುರ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ, ಅರುಣ ಅವರ ಕುಟುಂಬದವರ ಮೇಲೆ ಮೇಲ್ವರ್ಗದವರು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಎಫ್‌ಐಆರ್ ಸಹ ದಾಖಲಿಸಲಾಗಿದೆ. ಅವರಿಗೆ ಪೊಲೀಸ್ ರಕ್ಷಣೆ ಕೂಡ ನೀಡಿದ್ದೇವೆ.ದೌರ್ಜನ್ಯ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆದು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ ಎಂದರು.

ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಚೌಡಪ್ಪನಹಳ್ಳಿ ಎಂ. ಲೋಕೇಶ್, ಅರುಣಾ ಮತ್ತು ಕುಟುಂಬದವರು, ಭಾರತೀಯ ಶೂದ್ರ ಸೇನೆಯ ಸಂಸ್ಥಾಪಕ ಕೆ. ಸಿದ್ದರಾಜು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು