ಶುಕ್ರವಾರ, ನವೆಂಬರ್ 22, 2019
20 °C

ವಿಜಯಪುರ: ಟ್ರಾಫಿಕ್ ಸಮಸ್ಯೆ ನಿವಾರಿಸಲು ಒತ್ತಾಯ

Published:
Updated:
Prajavani

ವಿಜಯಪುರ: ಎಲ್ಲೆಂದರಲ್ಲಿ ರಸ್ತೆಯ ಮಧ್ಯೆ ನಿಲ್ಲುವ ವಾಹನಗಳು, ಜನದಟ್ಟಣೆಯಿಂದ ಟ್ರಾಫಿಕ್ ಜಾಮ್ ಆಗಿ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿ, ಆಟೋರೀಕ್ಷಾ, ಬೈಕ್, ಸೈಕಲ್ ಸವಾರರ ಅಡ್ಡಾದಿಡ್ಡಿ ಓಡಾಟದಿಂದ ಜನ ಹೈರಾಣಾಗುತ್ತಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಜನರು ನಿತ್ಯವೂ ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುವಂತಾಗಿದೆ. ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ವಾಹನ ಸವಾರರು ತಮ್ಮ ವಾಹನಗಳ ನಿಲುಗಡೆಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಒಂದೆಡೆಯಾದರೆ ಪಾರ್ಕಿಂಗ್ ಸಮಸ್ಯೆ ಮತ್ತೊಂದೆಡೆಯಾಗಿದೆ. ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ವ್ಯಾಪಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.

ಇಲ್ಲಿನ ಹಳೇ ಪುರಸಭಾ ಕಾರ್ಯಾಲಯದಿಂದ ಹಿಡಿದು ಗಾಂಧಿಚೌಕದವರೆಗೂ ರಸ್ತೆಯ ಎರಡು ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ನಿಲ್ಲಿಸಿರುತ್ತಾರೆ. ಕಾರುಗಳು ನಿಲ್ಲಿಸಿ ಹೋದರೆ, ಅವರನ್ನು ಕೇಳುವವರೇ ಇಲ್ಲದಂತಾಗಿದೆ.

‘ಕೆಲ ತಿಂಗಳ ಹಿಂದೆ ಪೊಲೀಸರ ಪರಿಶ್ರಮದಿಂದ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿತು. ಆದರೆ ಮತ್ತೆ ಈಗ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಪಟ್ಟಣದಾದ್ಯಂತ ಪೊಲೀಸರ ಹಾಗೂ ಕಾನೂನಿನ ಯಾವುದೇ ಭಯವಿಲ್ಲದ ಕಾರಣದಿಂದಾಗಿ ವಾಹನಗಳ ಅಡ್ಡಾದಿಡ್ಡಿಯಾಗಿ ಸಂಚಾರದ ಫಲವಾಗಿ ನಾಗರಿಕರ ಸುಗಮ ಓಡಾಟಕ್ಕೆ ಧಕ್ಕೆಯಾಗಿ ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಸುರಕ್ಷತೆಯಿಂದ ಓಡಾಡುವುದೇ ಕಷ್ಟವಾಗಿದೆ’ ಎಂದರು.

ಸ್ಥಳೀಯ ನಿವಾಸಿ ಜೆ.ಎನ್.ಶ್ರೀನಿವಾಸ್ ಮಾತನಾಡಿ, ‘ಇಲ್ಲಿನ ಬಸ್ ನಿಲ್ದಾಣವೂ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ದಿನವೂ ಎರಡರಿಂದ ಮೂರು ಅಪಘಾತಗಳಾಗುತ್ತಿವೆ. ಜನಸಂಚಾರ ಹೆಚ್ಚಾಗಿರುವ ಸಮಯದಲ್ಲೆ ಕೆಲ ಲಾರಿಗಳಲ್ಲಿ ಮೂಟೆಗಳನ್ನು ತುಂಬಿಸಿಕೊಂಡು ಇಳಿಸುತ್ತಿರುತ್ತಾರೆ. ಮಾಂಸದ ಅಂಗಡಿಗಳಿಗೆ ಸರಬರಾಜು ಮಾಡುವ ಕೋಳಿಗಳನ್ನು ಹಗಲಿನಲ್ಲೆ ತರುತ್ತಾರೆ. ಈ ವೇಳೆಯೂ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಪುರಸಭೆಯವರೂ ಗಮನಹರಿಸಿಲ್ಲ’ ಎಂದು ದೂರಿದರು.

ಮುಖಂಡ ಮುನಿರಾಜು ಮಾತನಾಡಿ, ‘ದ್ವಿಚಕ್ರ ವಾಹನಗಳಲ್ಲಿ ಬರುವ ವೇಗಕ್ಕೆ ರಸ್ತೆಗಳಲ್ಲಿ ಓಡಾಡಲಿಕ್ಕೂ ಭಯವಾಗುತ್ತದೆ. ಸಣ್ಣ ಸಣ್ಣ ಮಕ್ಕಳು ವಾಹನಗಳು ಚಾಲನೆ ಮಾಡಿಕೊಂಡು ಬರುತ್ತಾರೆ. ಒಂದೊಂದು ವಾಹನದಲ್ಲಿ ಮೂರು, ನಾಲ್ಕು ಮಂದಿ ಬರ‍್ತಾರೆ. ಅವರನ್ನು ಕೇಳುವವರೇ ಇಲ್ಲದಂತಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರಲ್ಲಿ ಭಯವೇ ಇಲ್ಲದಂತಾಗಿದೆ’ ಎಂದರು.

‘ಪಟ್ಟಣದ ಈ ಅವ್ಯವಸ್ಥೆ ಕುರಿತಂತೆ ಪೊಲೀಸರಲ್ಲಿ ಪ್ರಶ್ನಿಸಿದರೆ ಸಿಬ್ಬಂದಿ ಕೊರತೆ ಹಾಗೂ ಪುರಸಭೆಯವರೆ ನಗರದಲ್ಲಿನ ವಾಹನಗಳ ಪಾರ್ಕಿಂಗ್‌ಗಾಗಿ ನಿಗದಿತ ಸ್ಥಳ ಗುರುತಿಸಿಲ್ಲದ ಕಾರಣದಿಂದಾಗಿ ತಾವು ಎಷ್ಟೇ ಪ್ರಯತ್ನಿಸಿದರೂ ಸುಗಮ ಸಂಚಾರ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಸಿಬ್ಬಂದಿ ಹೇಳಿದರು.

ಪ್ರತಿಕ್ರಿಯಿಸಿ (+)