ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನವೇ ಸಸಿ ನೆಡುವ ಅಭಿಯಾನಕ್ಕೆ ಸ್ಫೂರ್ತಿ

ಅಭಿಯಾನದ 100ನೇ ಸಸಿ ನೆಟ್ಟ ಜಿಲ್ಲಾಧಿಕಾರಿ ಕರೀಗೌಡ , ಶೇ 99ರಷ್ಟು ಸಸಿಗಳು ಜೀವಂತ
Last Updated 17 ಮೇ 2019, 19:47 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅವಮಾನದಿಂದ ಪ್ರಾರಂಭವಾದ ‘ರೀ ಪ್ಲಾಟಿಂಗ್‌’ ಅಭಿಯಾನ ಯಾವ ಪ್ರತಿರೋಧಕ್ಕೂ ಅಂಜದೆ ಮುನ್ನಡೆಯುತ್ತಿದೆ. ಈ ಆಂದೋಲನ ಭಾಗವಾಗಿ ನೂರನೇ ಸಸಿ ನೆಡಲಾಗಿದೆ. ಜನ ಸಮುದಾಯದಿಂದಲೂ ನಿರೀಕ್ಷೆಗೂ ಮೀರಿ ಪ್ರೋತ್ಸಾಹ ಸಿಕ್ಕಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಸೇರಿದಂತೆ ಪ್ರಮುಖ ರಸ್ತೆ ಬದಿಯಲ್ಲಿ ಶತಮಾನಗಳಿಂದ ಬೆಳೆದು ನಿಂತಿದ್ದ ಆಲ, ಗೋಣಿ, ಹಿಪ್ಪೆ, ಮಳೆ ಮರ ಸೇರಿದಂತೆ ಹತ್ತಾರು ರೀತಿಯ ಬೃಹತ್‌ ಮರಗಳು ಅಭಿವೃದ್ಧಿ ಹೆಸರಿನಲ್ಲಿ ಧರೆಗೆ ಉರುಳಿ ಬೀಳುತ್ತಿದ್ದವು. ಪೊಲೀಸರು ಹಾಗೂ ಟಿಂಬರ್‌ ಲಾಭಿಯೂ ಇದರಲ್ಲಿ ಸೇರಿಕೊಂಡಿತ್ತು. ಇದರ ವಿರುದ್ಧ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆಯೂ ನಡೆದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ದೈಹಿಕವಾಗಿ ಹಲ್ಲೆ ನಡೆಯಿತು. ದೈಹಿಕ, ಮಾನಸಿಕ ನೋವೇ ‘ರೀ ಪ್ಲಾಟಿಂಗ್‌’ ಅಭಿಯಾನಕ್ಕೆ ಸ್ಫೂರ್ತಿ ಎಂದು ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌ ಅಭಿಪ್ರಾಯಪಟ್ಟರು.

ಏನಿದು ರೀ ಪ್ಲಾಂಟಿಂಗ್‌ ಅಭಿಯಾನ: ನಿವೃತ್ತ ಉಪನ್ಯಾಸಕಿ ಕೆ.ಎಸ್‌.ಪ್ರಭಾ ಅವರ ಮನೆ ಹತ್ತಿರ ಒಂದೂವರೆ ವರ್ಷಗಳ ಹಿಂದೆ ನಾಟಿ ಮಾಡಲಾಗಿದ್ದ ಬಾದಾಮಿ ಸಸಿ ಕಿತ್ತು ಹಾಕುವ ಅನಿವಾರ್ಯತೆ ಎದುರಾಗಿತ್ತು. ‘ಸಸಿ ಕಿತ್ತು ಬಿಸಾಡುವ ಬದಲು ಬೇರೆಲ್ಲಾದರೂ ನಾಟಿ ಮಾಡಲು ಸಾಧ್ಯವೇ ಪ್ರಯತ್ನಪಟ್ಟು ನೋಡಿ’ ಎಂದು ಪ್ರಭಾ ಅವರು ಸಲಹೆ ನೀಡಿದರು.

ಮರು ದಿನವೇ ಬಾದಾಮಿ ಸಸಿ ಬೇರುಗಳು ಹಾಳಾಗದಂತೆ ಕಿತ್ತು ಶಾಂತಿನಗರ ಮುತ್ಯಾಲಮ್ಮ ದೇಗುಲ ಸಮೀಪದ ಮುಖ್ಯರಸ್ತೆಯಲ್ಲಿರುವ ಮಂಜುನಾಥ್ ಅವರ ಭೂಮಿಕಾ ಕಾಂಡಿಮೆಂಟ್ಸ್‌ ಮುಂದೆ ನಾಟಿ ಮಾಡಲಾಯಿತು. ಪರಿಸರ ಪ್ರೇಮಿ ಮಂಜುನಾಥ್‌ ಬಾದಾಮಿ ಸಸಿಗೆ ಸೂಕ್ತ ರಕ್ಷಣೆ ನೀಡಿ ಜತನದಿಂದ ಪೋಷಣೆ ಮಾಡಿದರು. ಇದನ್ನು ಗಮನಿಸಿದ ಕೆಲವರು ತಮ್ಮ ಮನೆಗಳ ಮುಂದೆಯೂ ಸಸಿ ಬೆಳೆಸುವಂತೆ ಮನವಿ ಮಾಡಿದರು. ಫೇಸ್‌ಬುಕ್‌ನಲ್ಲಿ ಸ್ನೇಹಿತರ ಜನ್ಮ ದಿನಾಚರಣೆ ಬಗ್ಗೆ ಮಾಹಿತಿ ಪಡೆದು ಸಿಹಿ ಕೊಡುವ ಬದಲು ಒಂದು ಸಸಿ ಕೊಡುವಂತೆ ಮನವಿ ಮಾಡುತ್ತಿದ್ದೇವು. ಈ ಮೊದಲೇ ಗುರುತಿಸಿರುವ ಸೂಕ್ತ ಸ್ಥಳದಲ್ಲಿ ಸಸಿ ನಾಟಿ ಮಾಡಿ ಪೋಷಣೆ ಮಾಡುವ ಅಭಿಯಾನ ನಡೆದು ಬಂದಿದೆ ಎಂದು ಯುವ ಸಂಚಲನ ತಂಡದ ದಿವಾಕರ್‌ನಾಗ್‌ ತಮ್ಮ ಹಾದಿಯನ್ನು ಸ್ಮರಿಸಿದರು.

ಶೇ99ರಷ್ಟು ಸಸಿಗಳು ಜೀವಂತ: ‘ರೀ ಪ್ಲಾಟಿಂಗ್‌ ಅಭಿಯಾನದಲ್ಲಿ ಸಸಿಗಳ ಸಂಖ್ಯೆ ಮುಖ್ಯ ಅಲ್ಲ. ನೆಟ್ಟ ಸಸಿ ಬೆಳೆದು ದೊಡ್ಡದಾಗಬೇಕು. 2018ರ ಆಗಸ್ಟ್‌ನಲ್ಲಿ ಪ್ರಾರಂಭವಾದ ಅಭಿಯಾನದಲ್ಲಿ ಇಲ್ಲಿಯವರೆಗೆ ನೆಟ್ಟಿರುವ ಶೇ99ರಷ್ಟು ಸಸಿಗಳು ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಈ ಅಭಿಯಾನ ಸದ್ಯಕ್ಕೆ ನಗರ ವ್ಯಾಪ್ತಿಗೆ ಸೀಮಿತವಾಗಿದೆ ಎನ್ನುತ್ತಾರೆ ಯುವ ಸಂಚಲನ ತಂಡದ ಮುರಳಿ, ಭರತ್‌.

ಸಖಿ ತಂಡ ಸದಸ್ಯರ ಭೇಟಿ: ಹೊಸ‍‍ಪೇಟೆ ‘ಸಖಿ’ ತಂಡದ ಸದಸ್ಯರು ಖುದ್ದು ಭೇಟಿ ನೀಡಿ ‘ರೀ ಪ್ಲಾಟಿಂಗ್‌’ಬಗ್ಗೆ ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ಈ ಹಾದಿಯಲ್ಲಿ ಸಾಗಿದ್ದಾರೆ.

ನಾವು ಆರಂಭಿಸಿದ್ದೇವೆ ಅಭಿಯಾನ: ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಕೆಲಸಕ್ಕೂ ಯುವ ಸಂಚಲನ ತಂಡವೇ ಸ್ಫೂರ್ತಿ. ಈಗಾಗಲೇ ಎಂ.ಎ.ಪ್ರಕಾಶ್ ಬಡಾವಣೆ ಪಾರ್ಕ್‌ನಲ್ಲಿ ಸಂಘದಿಂದ ಸಸಿಗಳನ್ನು ನೆಟ್ಟಿದ್ದಾರೆ. ‘ಸಸಿ ನಮ್ಮದು, ಪೋಷಿಸುವ ಜವಾಬ್ದಾರಿ ನಿಮ್ಮದು’ ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ’ ಎನ್ನುವ ಘೋಷ ವಾಕ್ಯದೊಂದಿಗೆ ನಗರವನ್ನು ಹಸಿರೀಕರಣ ಮಾಡುವ ಗುರಿ ಹೊಂದಿರುವುದಾಗಿ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್‌ರೆಡ್ಡಿ, ರಾಜಶೇಖರ್‌ ತಿಳಿಸಿದರು.

ಗಣ್ಯರ ಜನ್ಮ ದಿನಕ್ಕೊಂದು ಸಸಿ: ‘ಕುವೆಂಪು ಅವರ ವಿಶ್ವಮಾನವ ದಿನಾಚರಣೆ, ಬಸವ ಜಯಂತಿ ನೆನಪಿನಲ್ಲೂ ಸಸಿಗಳನ್ನು ನೆಡಲಾಗಿದೆ. ಕಾರಂತರ ನೆನಪಿನಲ್ಲಿ ಅವರ ಮಾನಸ ಪುತ್ರಿ ಮಾಲಿನಿ ಮಲ್ಯ ಅವರಿಂದಲೂ ಒಂದು ಸಸಿಯನ್ನು ನಾಟಿ ಮಾಡಿಸಿದ್ದೇವೆ’ ಎನ್ನುತ್ತಾರೆ ಯುವ ಸಂಚಲನ ತಂಡದ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT