ಭಾನುವಾರ, ನವೆಂಬರ್ 17, 2019
24 °C
ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ

ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ದೇಶದ್ರೋಹಿಯೇ?

Published:
Updated:
Prajavani

ರಾಮನಗರ: ‘ದೇಶಕ್ಕಾಗಿ ಕರುಳಕುಡಿಗಳನ್ನೇ ಒತ್ತೆ ಇಟ್ಟ ಟಿಪ್ಪು ದೇಶದ್ರೋಹಿಯಲ್ಲ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ನಷ್ಟ ತುಂಬಿ ಕೊಡುವಂತೆ ಬ್ರಿಟಿಷರ ನಡುವೆ ಆದ ಒಪ್ಪಂದದ ಸಂದರ್ಭದಲ್ಲಿ ಟಿಪ್ಪು ದೇಶದ ಜನರ ಮೇಲೆ ತೆರಿಗೆ ಹೊರೆಯಾಗಬಾರದೆಂದು ಕರುಳ ಕುಡಿಗಳನ್ನೆ ಒತ್ತೆ ಇಡುತ್ತಾನೆ. ಹೀಗಿರುವಾಗ ದ್ರೋಹಿ ಹೇಗಾಗುತ್ತಾನೆ?’ ಎಂದು ಪ್ರಶ್ನಿಸಿದರು.

‘ಅವರು ಎಂದೂ ಅನ್ಯಧರ್ಮಗಳ ವಿರುದ್ಧವಾಗಿ ನಡೆದುಕೊಂಡವನಲ್ಲ ಎಂಬುದು ದಾಖಲೆಗಳಿಂದ ವ್ಯಕ್ತವಾಗುತ್ತದೆ. ಬ್ರಿಟಿಷ್ ಸೇನೆ ಮಲಬಾರ್ ಹಾಗೂ ಮಂಗಳೂರು ಭಾಗದಲ್ಲಿ ಪದೇ ಪದೇ ನಡೆಸುತ್ತಿದ್ದ ಕುತಂತ್ರಕ್ಕೆ ಪ್ರತಿಯಾಗಿ ಅನಿವಾರ್ಯ ಸಂದರ್ಭದಲ್ಲಿ ಆದ ಮತಾಂತರದ ಸಂಗತಿಯನ್ನು ಇತಿಹಾಸ ತಿರುಚುವಂತೆ ಮಾಡುತ್ತಿರುವುದು ದುರದೃಷ್ಟಕರ’ ಎಂದು ತಿಳಿಸಿದರು.

‘ಅದರ ಹೊರತಾಗಿ ಟಿಪ್ಪು ಸರ್ವಧರ್ಮ ಸಹಿಷ್ಣು, ಟಿಪ್ಪು ಒಬ್ಬ ಸೂಫಿ ಸಂತನಾಗಬೇಕಿದ್ದ ವ್ಯಕ್ತಿ. ಅವನ ಆಡಳಿತಾವಧಿಯಲ್ಲಿ ಸಾಕಷ್ಟು ದೇವಾಲಯಗಳ ಜೀರ್ಣೋದ್ಧಾರವಾಗಿವೆ. ಮರಾಠರಿಂದ ದಾಳಿಗೊಳಗಾದ ಶೃಂಗೇರಿ ದೇವಸ್ಥಾನ, ನಂಜನಗೂಡಿನ ಪಚ್ಚೆಲಿಂಗ ವಿಗ್ರಹ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಹೀಗೆ ಹಲವಾರು ಉದಾಹರಣೆಗಳಿವೆ ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಧರ್ಮ, ಜಾತಿಗಳ ನಡುವೆ ಸಂಘರ್ಷಕ್ಕೆ ಆಸ್ಪದ ಮಾಡಿಕೊಡುವ ಮೂಲಕ ಧರ್ಮ ರಾಜಕಾರಣಕ್ಕೆ ಕೈ ಹಾಕಿದೆ. ಟಿಪ್ಪು ಒಬ್ಬ ಹಿಂದೂ ವಿರೋಧಿ, ಕನ್ನಡ ದ್ರೋಹಿ, ಮತಾಂತರಿ ಎಂದು ಬಿಂಬಿಸುತ್ತಾ ಮತ ರಾಜಕಾರಣದ ಬೇಳೆ ಬೇಯಿಸಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸಭೆ ನಡೆಸಿ ಚಚಿಸಿರುವ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಮೂರು ದಿನಗಳ ಒಳಗೆ ವರದಿ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಈಗಾಗಲೇ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ ಎಂಬ ಸಂದೇಶ ನೀಡಿ ಕೋಮುವಾದಿ ನಿರ್ಣಯಕ್ಕೆ ಮುಂದಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡು ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಭಿನ್ನಮತ ಮೂಡಿಸಿ ಮತ ಧ್ರುವೀಕರಣಕ್ಕೆ ಧುಮುಕಿವೆ. ಒಟ್ಟಿನಲ್ಲಿ ಬಿಜೆಪಿ ಪಕ್ಷ ಹೊಡೆದಂತೆ, ಕಾಂಗ್ರೆಸ್ ಪಕ್ಷ ಅತ್ತಂತೆ ಮಾಡುತ್ತಿವೆ ಎಂದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ನಾಗೇಶ್ ಮಾತನಾಡಿ, ಸಾಮಾಜಿಕ ಸುಧಾರಣೆಯ ಹರಿಕಾರನಾಗಿದ್ದ ಟಿಪ್ಪು ಸುಲ್ತಾನ ತಮ್ಮ ಸಾಮ್ರಾಜ್ಯದಲ್ಲಿ ಹಲವಾರು ಸುಧಾರಣೆ ಕ್ರಮಗಳನ್ನು ಜಾರಿಗೆ ತಂದಿದ್ದ. ಟಿಪ್ಪು ಕಾಲದಲ್ಲಾಗಿರುವ ಭೂಸುಧಾರಣೆ, ಆಧುನಿಕ ಕೃಷಿ ಪದ್ಧತಿ, ರೇಷ್ಮೆಯನ್ನು ಭಾರತಕ್ಕೆ ಪರಿಚಯಿಸಿದ ದಾಖಲೆಗಳಿವೆ. ಸ್ವತಃ ಬರಹಗಾರನಾಗಿದ್ದ ಟಿಪ್ಪು ಸಾಕಷ್ಟು ಗ್ರಂಥಗಳ ಗ್ರಂಥಾಲಯವನ್ನು ಅರಮನೆಯಲ್ಲೇ ನಿರ್ಮಿಸಿದ್ದ ಹಾಗೂ ಜಗತ್ತೇ ಬೆರಗಾಗಿದ್ದ ರಾಕೆಟ್‍ ತಯಾರಿಕೆಯ ವಿಜ್ಞಾನ ಪ್ರಯೋಗಾಲಯವನ್ನು ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿದ್ದು ಟಿಪ್ಪು ಕೀರ್ತಿಯ ಕುರುಹುಗಳು ಎಂದು ತಿಳಿಸಿದರು.

ಬಿಎಸ್ ಪಿ ಮುಖಂಡರಾದ ಎಸ್. ಕುಮಾರ್, ಅಪ್ರೋಜ್, ಅಸ್ಲಂ, ದೇವರಾಜು ಇದ್ದರು.

ಪ್ರತಿಕ್ರಿಯಿಸಿ (+)