ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಹಲಸಿನ ಹಣ್ಣುಗಳ ಸುಗ್ಗಿ

Published 27 ಮೇ 2023, 4:53 IST
Last Updated 27 ಮೇ 2023, 4:53 IST
ಅಕ್ಷರ ಗಾತ್ರ

ಏಪ್ರಿಲ್‌–ಮೇ ತಿಂಗಳಲ್ಲಿ ಬೆಂಗಳೂರಿನಿಂದ ಹಿಂದೂಪುರ, ಗೌರಿಬಿದನೂರು ಕಡೆಗೆ ಹೋಗುವ ಪ್ರಯಾಣಿಕರು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ, ಡಿ.ಕ್ರಾಸ್‌ನ ರಸ್ತೆಯ ತಿರುವಿನಲ್ಲಿ ಸ್ವಲ್ಪ ಹೊತ್ತು ತಮ್ಮ ವಾಹನಕ್ಕೆ ’ಬ್ರೇಕ್‌’ ಹಾಕ್ತಾರೆ !

ಅದರಲ್ಲೇನು ವಿಶೇಷ ಅಂತೀರಾ? ವಿಶೇಷ ಇದೆ. ಅವರನ್ನು ಬ್ರೇಕ್ ಹಾಕುವಂತೆ ಮಾಡುವುದು, ರಸ್ತೆಯಲ್ಲಿರುವ ಹಂಪ್‌ಗಳಲ್ಲ. ರಸ್ತೆ ಪಕ್ಕದಲ್ಲಿ ರಾಶಿ ರಾಶಿಯಾಗಿರುವ ಹಲಸಿನ ಹಣ್ಣುಗಳ ರಾಶಿ!  ಹಣ್ಣುಗಳ ರಾಶಿಯ ಮೇಲೆ ಬಿಡಿಸಿಟ್ಟಿರುವ ತೊಳೆಗಳು, ಬಣ್ಣ, ಪರಿಮಳದೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತವೆ. 

ಹೌದು. ಈಗ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹಲಸಿನ ಹಣ್ಣುಗಳ ಮಾರಾಟದ ಭರಾಟೆ ಜೋರಾಗಿದೆ. ತೂಬಗೆರೆ ಹೋಬಳಿಯ ಕಾಚಹಳ್ಳಿ, ಸಾಸಲು ಹಾಗೂ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವೈವಿದ್ಯಮಯ ಹಲಸಿನ ತಳಿಗಳ ಮರಗಳಿವೆ.  ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ರುದ್ರಾಕ್ಷಿ ಹಲಸು, ಬಿತ್ತನೆ ಏಕಾದಶಿ ಹಲಸು.. ಹೀಗೆ ತಳಿ ವೈವಿಧ್ಯವಿದೆ. ಜೊತೆಗೆ, ಹಳದಿ, ಕೆಂಪು, ಬಿಳಿ ಬಣ್ಣದ ತೊಳೆಗಳಿರುವ ಹಲಸಿನ ಹಣ್ಣುಗಳಿವೆ. ಇವೆಲ್ಲವೂ ಬಣ್ಣದಿಂದಲ್ಲದೇ, ರುಚಿಯಿಂದಲೂ ಜನಪ್ರಿಯವಾಗಿವೆ.

ನಾಲ್ಕು ತಿಂಗಳ ಸುಗ್ಗಿ

ಮಾರ್ಚ್‌ ತಿಂಗಳಿಂದ ಪ್ರಾರಂಭವಾಗುವ ಹಲಸಿನ ಹಣ್ಣಿನ ಸುಗ್ಗಿ ಜೂನ್‌ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯವಾಗುತ್ತದೆ. ಮಾರುಕಟ್ಟೆಗೆ ಮಾವಿನ ಹಣ್ಣು ಬರುವುದಕ್ಕೂ ಮುನ್ನವೇ ಲಗ್ಗೆ ಇಡುವ ಹಲಸಿನ ಹಣ್ಣಿನ ರುಚಿ, ಪರಿಮಳಕ್ಕೆ ಗ್ರಾಹಕರು ಮಾರು ಹೋಗದಿರಲು ಸಾಧ್ಯವೇ ಇಲ್ಲ.

ಏಪ್ರಿಲ್‌ ತಿಂಗಳಲ್ಲಿ ಹಲಸಿನ ಹಣ್ಣಿನ ಬೆಲೆ ತುಸು ಹೆಚ್ಚಿರುತ್ತದೆ. ಮಾವು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ, ಸ್ವಲ್ಪ ಮಟ್ಟಿಗೆ ಬೆಲೆ ಕಡಿಮೆಯಾಗುತ್ತದೆ. ಆಗ, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಹಲಸಿನ ಹಣ್ಣು ಲಭ್ಯ.

ಸಗಟು–ಚಿಲ್ಲರೆ ಮಾರಾಟ

ಸುಮಾರು 25 ರಿಂದ 35 ಕೆ.ಜಿ.ತೂಕದ ಹಲಸಿನ ಹಣ್ಣು ₹100 ರಿಂದ ₹150 ಗಳವರೆಗೂ ಮಾರಾಟವಾಗುತ್ತಿವೆ. ಹಲಸಿನ ಹಣ್ಣು ಖರೀದಿಗೆ ಬರುವ ಬಹುತೇಕ ಗ್ರಾಹಕರು `ಹಲಸಿನ ಹಣ್ಣಿನ ತೊಳೆಯ ಸವಿಯನ್ನು ಸವಿದೇ ಖರೀದಿಸುವುದು ವಿಶೇಷ. ₹10ಕ್ಕೆ ಮೂರರಿಂದ ನಾಲ್ಕು ತೊಳೆಗಳು ಮಾರಾಟವಾಗುತ್ತಿವೆ.

ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಹಲಸಿನ ಹಣ್ಣಿನ‌ ವ್ಯಾಪಾರಸ್ಥರು ಇಲ್ಲಿಂದ ಲೋಡುಗಟ್ಟಲೆ ಹಣ್ಣನ್ನು ಖರೀದಿಸಿಕೊಂಡು ಹೋಗುತ್ತಾರೆ. ಇದಷ್ಟೇ ಅಲ್ಲದೆ ಬೆಂಗಳೂರಿನ ಗ್ರಾಹಕರು ಭಾನುವಾರ ಮತ್ತು ಇತರೆ ರಜಾ ದಿನಗಳಲ್ಲಿ ಕುಟುಂಬ ಸಮೇತ ಇಲ್ಲಿಗೆ ಬಂದು ಹಣ್ಣು ಖರೀದಿಸುತ್ತಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಭಕ್ತರು ಬರುತ್ತಾರೆ. ಹೀಗಾಗಿ ಈ ದಿನದಂದು ಎಪಿಎಂಸಿ ಮಾರುಕಟ್ಟೆ ಸಮೀಪ ಹೆಚ್ಚಿನ ಹಲಸಿನ ಹಣ್ಣಿನ ರಾಶಿ ಹೆಚ್ಚಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT