ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಚುಕ್ಕಾಣಿ: ಗೊಟ್ಟಿಗೆರೆ ಮಂಜುನಾಥ್

Last Updated 25 ಫೆಬ್ರುವರಿ 2021, 4:25 IST
ಅಕ್ಷರ ಗಾತ್ರ

ಆನೇಕಲ್: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಸ್ವಂತ ಬಲದಲ್ಲಿ ಹಿಡಿಯಲಿದೆ. ಆನೇಕಲ್‌ ವಿಧಾನಸಭಾ ಕ್ಷೇತ್ರ ಇದಕ್ಕೆ ಮುನ್ನುಡಿಯಾಗಬೇಕು ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್‌ ತಿಳಿಸಿದರು.

ತಾಲ್ಲೂಕಿನ ಮುಗಳೂರಿನಲ್ಲಿ ನಡೆದ ಜೆಡಿಎಸ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಮೊದಲನೆ ಬಾರಿಗೆ ಜೆಡಿಎಸ್‌ವತಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ಪಿ. ರಾಜು ಅವರನ್ನು ಘೋಷಿಸಲಾಗಿದೆ. ಬೂತ್‌ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪಕ್ಷದ ಸಂಘಟನೆ ಮಾಡಿ ತಾಲ್ಲೂಕಿನಲ್ಲಿ ಪಕ್ಷದ ಗೆಲುವಿಗೆ ಭದ್ರ ಬುನಾದಿ ಹಾಕಬೇಕಾಗಿದೆ ಎಂದರು.

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನರನ್ನು ದಿವಾಳಿ ಎಬ್ಬಿಸಿದೆ. ಜನರ ಬದುಕು ದುಸ್ಥರವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್‌ನ ಜನವಿರೋಧಿ ನೀತಿಗಳನ್ನು ಜನತೆಗೆ ತಿಳಿಸಿಕೊಡುವ ಮೂಲಕ ಜಾಗೃತಿ ಮೂಡಿಸಲು ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಬೇಕು ಎಂದು ಹೇಳಿದರು.

ರಾಜ್ಯ ಮುಖಂಡ ಮೊಹಿದ್‌ ಅಲ್ತ್‌ಪ್‌ ಖಾನ್‌ ಮಾತನಾಡಿ, ದೆಹಲಿಯಲ್ಲಿ ರೈತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಅವರಿಗೆ ಸ್ಪಂದಿಸುತ್ತಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₹ 40 ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತಸ್ನೇಹಿ ಆಡಳಿತ ನೀಡಿದ್ದಾರೆ. ಯುವಕರು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಜೆಡಿಎಸ್‌ ಸರ್ಕಾರ ಬರಲು ಶ್ರಮಿಸಬೇಕು ಎಂದರು.

ಆನೇಕಲ್‌ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಪಿ. ರಾಜು ಮಾತನಾಡಿದರು. ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಗೌಡ, ಮುಖಂಡರಾದ ಆರ್‌. ದೇವರಾಜು, ಶ್ರೀನಿವಾಸ್‌, ಪಾರ್ಥಸಾರಥಿ, ರಾಜಣ್ಣ, ಗೋಪಾಲಕೃಷ್ಣ, ಕೂಗೂರು ನಾರಾಯಣರೆಡ್ಡಿ, ನಂಜಾರೆಡ್ಡಿ, ರಾಮು, ರುದ್ರೇಶ್, ನಾರಾಯಣಸ್ವಾಮಿ, ರವಿ, ಮಧುಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT