ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಜೆಡಿಎಸ್‌ ರಸ್ತೆ ತಡೆ

ರಾಷ್ಟ್ರೀಯ ಹೆದ್ದಾರಿ 648ರ ಕಾಮಗಾರಿ ಕೂಡಲೇ ಆರಂಭಿಸಲು ಆಗ್ರಹ
Last Updated 19 ಅಕ್ಟೋಬರ್ 2019, 13:13 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹೊಸಕೋಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ದಾಬಸ್‍ಪೇಟೆಯವರೆಗಿನ ರಾಷ್ಟ್ರೀಯ ಹೆದ್ದಾರಿ 648ರ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಪಕ್ಷದ ವತಿಯಿಂದ ಬೆಂಗಳೂರು ಹಿಂದೂಪುರ ಹೆದ್ದಾರಿಯ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಸ್ತೆ ತಡೆಯಿಂದಾಗಿ ಕೆಲ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆ ಕಾಮಗಾರಿ ಕೈಗೊಳ್ಳದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 648ರ ಕಾಮಗಾರಿ ಸ್ಥಗಿತಗೊಂಡು ಐದು ವರ್ಷಗಳಾಗಿವೆ. ಇತ್ತ ಹೆದ್ದಾರಿಯೂ ನಿರ್ಮಾಣವಾಗದೇ ಸಾಮಾನ್ಯ ರಸ್ತೆಯೂ ಸಹ ಇಲ್ಲದೇ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನಗಳು ಸಂಚಾರ ಮಾಡಬೇಕಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಒಡಾಡುವ ಬೈಕ್ ಸವಾರರು ಕೈಕಾಲುಗಳನ್ನು ಮುರಿದುಕೊಂಡು ಮನೆ ಸೇರುತ್ತಿದ್ದಾರೆ. ಹತ್ತಾರು ಜನ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ ಎಂದರು.

ಕಾಮಗಾರಿ ಆರಂಭಕ್ಕೆ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ದೂರುಗಳನ್ನು ಹೇಳುತ್ತಲೇ ಕಾಲ ಕಳೆಯುತಿದ್ದಾರೆ ವಿನಾ ರಸ್ತೆ ಕಾಮಗಾರಿ ಆರಂಭವಾಗಿಲ್ಲ. ಕ್ಷೇತ್ರದ ಶಾಸಕರು ಹಾಗೂ ಸಂಸದರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ಕಾಮಗಾರಿ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್.ಕೆಂಪರಾಜು, ನಗರ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಇತ್ತೀಚೆಗಷ್ಟೇ ಮೆಣಸಿ ಬಳಿ ಬೈಕ್ ಸವಾರರೊಬ್ಬರಿಗೆ ಅಪಘಾತವಾಗಿದೆ. ನಿತ್ಯ ಇಲ್ಲಿ ಅಪಘಾತಗಳು ನಡೆಯತ್ತಲೇ ಇವೆ. ಶಾಸಕರನ್ನು ಕೇಳಿದರೆ ಇದು ಕೇಂದ್ರ ಸರ್ಕಾರದ್ದು ಎನ್ನುತ್ತಾರೆ. ಸಂಸದರನ್ನು ಕೇಳಿದರೆ ಈ ಹಿಂದೆ ರಾಜ್ಯ ಸರ್ಕಾರದ ಕಡೆಯಿಂದ ಆಗಿದ್ದ ತೊಂದರೆಯಿಂದ ಕಾಮಗಾರಿ ನಿಂತಿದೆ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿರುವ ಹಿನ್ನೆಲೆಯಲ್ಲಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾವು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಹಣ ಬಿಡುಗಡೆ ಮಾಡುವಂತಿಲ್ಲ ಎನ್ನುತ್ತಾರೆ. ಯಾರೂ ಇಲ್ಲಿಯವರೆಗೂ ಈ ಬಗ್ಗೆ ಗಮನವನ್ನೇ ನೀಡಿಲ್ಲ. ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗಾತ್ರದ ಗುಂಡಿಗಳನ್ನು ಮುಚ್ಚಿಲ್ಲ. ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳಲ್ಲಿ ನಿರ್ಲಕ್ಷ್ಯ ಕಾಣುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ, ನಗರ ಘಟಕದ ಅಧ್ಯತಕ್ಷ ವಡ್ಡರಹಳ್ಳಿರವಿ, ಕಾರ್ಯಾಧ್ಯಕ್ಷ ಆರ್‌.ಕೆಂಪರಾಜ್‌, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಆಂಜನಗೌಡ, ಮುಖಂಡರಾದ ದೇವರಾಜಮ್ಮ, ಶಾಂತಮ್ಮ, ಭಾಸ್ಕರ್, ಮಹೇಶ್ ಬೆಳವಂಗಲ, ನಾಗರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT