ದೇವನಹಳ್ಳಿ: ತಾಲ್ಲೂಕಿನ ಬೈಚಾಪುರ ಗ್ರಾಮದಲ್ಲಿ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವ ಬುಧವಾರ ನಸುಕಿನ ಜಾವ ವಿಜೃಂಭಣೆಯಿಂದ ನೆರವೇರಿತು.
ವಹ್ನಿಕುಲ ತಿಗಳ ಕ್ಷತ್ರಿಯ ಸಮುದಾಯವರಿಂದ ಆಯೋಜಿಸಿದ್ದ ಎರಡನೇ ವರ್ಷದ ಕರಗ ಮಹೋತ್ಸವಕ್ಕೆ ಬೈಚಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು.
ಗ್ರಾಮದ ಪ್ರತಿ ರಸ್ತೆಯಲ್ಲೂ ಝಗಮಗಿಸುವ ಬೆಳಕು, ಓಲಗದ ಸದ್ದು ದೇವಸ್ಥಾನವನ್ನು ಆವರಿಸಿತ್ತು. ದುಂಡು ಮಲ್ಲಿಗೆಯ ಹೂವುಗಳಿಂದ ಕರಗವನ್ನು ಸೊಗಸಾಗಿ ಅಲಂಕರಿಸಲಾಗಿತ್ತು. ಬುಧವಾರ ಮುಂಜಾನೆ 2.15 ನಿಮಿಷಕ್ಕೆ ಕರಗದ ಮೆರವಣಿಗೆ ಆರಂಭಗೊಂಡಿತು. ಅಲ್ಲಿ ಜಮಾಯಿಸಿದ್ದ ಭಕ್ತರಿಗೆ ದೇವಸ್ಥಾನದಿಂದ ಮಲ್ಲಿಗೆಯ ಪರಿಮಳ ಹರಡುತ್ತ ಕರಗದ ದರ್ಶನವಾಯಿತು.
ಕರಗ ಕಾಣಿಸಿಕೊಂಡ ಕೂಡಲೇ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ, ಗೋವಿಂದಾ’ ಎಂದು ನಾಮ ಸ್ಮರಣೆ ಮಾಡುತ್ತ ಕರಗದೊಂದಿಗೆ ಹೆಜ್ಜೆ ಹಾಕಿದರು. ದಿನ್ನೆಮನೆ ಕುಟುಂಬದ ಬಿ.ಎಂ. ಶುಭಕರ (ಮೋಹನ್) ಈ ಬಾರಿ ಕರಗ ಹೊತ್ತು ಗ್ರಾಮದ ಎಲ್ಲೆಡೆ ಸಾಗಿದರು. ದೈವ ಸ್ವರೂಪಿಯ ಹೆಜ್ಜೆಗೆ ಭಕ್ತರೆಲ್ಲ ತಲೆದೂಗಿಸಿದರು.
ವೀರಕುಮಾರರು ರಕ್ಷಕರಾಗಿ ನಿರ್ದಿಷ್ಟ ಸ್ಥಳಗಳಲ್ಲಿ ಅಲಗು ಸೇವೆ ಮಾಡುತ್ತ ಕರಗದೊಂದಿಗೆ ಸಾಗಿದರು. ಕರಗ ಧಾರಿಯ ಸ್ವಾಗತಕ್ಕೆ ಮನೆಗಳ ಮುಂದೆ ಹೂಗಳ ರಂಗೋಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರದ್ಧೆ, ಭಕ್ತಿಯಿಂದ ನಡೆದ ಕರಗ ಶಕ್ತ್ಯೋತ್ಸವ ಭಕ್ತಾದಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕರಗ ನೋಡಲು ಗ್ರಾಮದ ಇಕ್ಕೆಲಗಳಲ್ಲಿ ಜನ ರಾತ್ರಿಯಿಡೀ ಸೇರಿದ್ದರು. ಬೆಳಿಗ್ಗೆ 7.30ಕ್ಕೆ ಕರಗ ಸಂಪನ್ನಗೊಂಡಿತು.
ಮಾರ್ಚ್ 27ರಂದು ಧ್ವಜಾ ರೋಹಣ ಮೂಲಕ ಕರಗದ ಆಚರ ಣೆಯ ಧಾರ್ಮಿಕ ಕಾರ್ಯಕ್ರಮಗಳು ಆರಂಭ ಗೊಂಡಿದ್ದವು. ಭಾನುವಾರ ರಾತ್ರಿ ಹಸಿ ಕರಗ ನೆರವೇರಿತು. ಸೋಮವಾರದಂದು ಗ್ರಾಮಸ್ಥರೆಲ್ಲ ದೀಪಾರತಿ ಮೂಲಕ ದೇವರನ್ನು ಆರಾಧಿಸಿದರು.
ಕಲಾ ತಂಡಗಳ ರಂಗು: ಕರಗ ಪ್ರಯುಕ್ತ ದೇವಸ್ಥಾನದ ಪಕ್ಕದ ಜಾಗದಲ್ಲೇ ಕಲಾ ಪ್ರದರ್ಶನಗಳಿಗೆ ವೇದಿಕೆ ಸಜ್ಜುಗೊಳಿಸಲಾಗಿತ್ತು. ಕಲಾವಿದರು ರಾತ್ರಿಯಿಡೀ ವಿವಿಧ ಕಲೆಗಳನ್ನು ಪ್ರದರ್ಶಿಸಿದರು. ಇದನ್ನು ವೀಕ್ಷಿಸಲು ಜನರಸಾಗರವೇ ಸೇರಿತ್ತು. 10ಕ್ಕೂ ಹೆಚ್ಚು ದೈವ ಪಲ್ಲಕ್ಕಿಗಳ ಮೆರವಣಿಗೆಯು ಕರಗದ ಮೆರುಗು ಹೆಚ್ಚಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.