ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: 242 ಎಕರೆ ಸ್ವಾಧೀನಕ್ಕೆ ಕೆಐಎಡಿಬಿ ನೋಟಿಸ್‌

ಭೂಮಿ ಪಡೆಯಲು ಸರ್ಕಾರ ಬಲವಂತ--: ಚನ್ನರಾಯಪಟ್ಟಣ ರೈತರ ಆಕ್ರೋಶ
Last Updated 24 ಜನವರಿ 2022, 6:27 IST
ಅಕ್ಷರ ಗಾತ್ರ

ವಿಜಯಪುರ: ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗುತ್ತಿದ್ದಂತೆ ನಾವೆಲ್ಲರೂ ತುಂಬಾ ಸಂತೋಷಪಟ್ಟಿದ್ದೆವು. ನಾವು ಗುಣಮಟ್ಟದ ತರಕಾರಿಗಳು, ಹಣ್ಣುಗಳು, ಹೂಗಳನ್ನು ಬೆಳೆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಹೋಗಿ ಮಾರಾಟ ಮಾಡಲಿಕ್ಕೆ ಅವಕಾಶವಾಗುತ್ತದೆ ಎಂದು ಕನಸು ಕಂಡಿದ್ದೆವು. ನಮ್ಮ ಮನೆಗಳಲ್ಲಿನ ನಿರುದ್ಯೋಗಿ ಮಕ್ಕಳಿಗೂ ಆಸರೆಯಾಗಬಹುದೆಂದು ಹಲವಾರು ಕನಸುಗಳು ಕಟ್ಟಿಕೊಂಡಿದ್ದೆವು. ಆದರೆ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳು ತಲೆ ಎತ್ತಿ, ನಮ್ಮ ನೆಮ್ಮದಿಯ ಬದುಕಿಗೆ ಕಂಟಕವಾಗುತ್ತದೆ ಎಂದು ಕನಸಿನಲ್ಲೂ ನೆನೆಸಿರಲಿಲ್ಲ...

ಕೈಗಾರಿಕೆಗಾಗಿ ಮತ್ತೆ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು ಬೇಸರದ ನುಡಿಗಳಿವು.

‘ಚನ್ನರಾಯಪಟ್ಟಣ ಗ್ರಾಮದ ಸರ್ವೆ ನಂಬರ್ 181ರಲ್ಲಿ ಭೂ ಮಂಜೂರಾತಿಗಾಗಿ 30 ವರ್ಷಗಳು ನಿರಂತರವಾಗಿ ಹೋರಾಟ ಮಾಡಿದ್ದೇವೆ. ದುಡಿದು ತಿನ್ನಲಿಕ್ಕಾಗಿ ಭೂಮಿ ನೀಡುವಂತೆ ಸರ್ಕಾರದೊಟ್ಟಿಗೆ ಸಂಘರ್ಷಕ್ಕೆ ಇಳಿದ ಕಾರಣ, ನಮ್ಮ ಮೇಲೆ ಕೇಸುಗಳು ಹಾಕಿದ್ದರು. ಕೆಲವರು ಆಸ್ಪತ್ರೆಗಳಿಗೆ ದಾಖಲಾಗಿ, ತಿಂಗಳಾನುಗಟ್ಟಲೇ ಚಿಕಿತ್ಸೆ ಪಡೆದರು. ಕೆಲವರು ಜೈಲುವಾಸ ಅನುಭವಿಸಿದ್ದೇವೆ. ಆನಂತರವೇ ನಮಗೆ ಭೂಮಿ ಮಂಜೂರು ಮಾಡಿಕೊಟ್ಟಿದ್ದಾರೆ. ಈಗ ಈ ಭಾಗದಲ್ಲಿನ 242 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ’ ಎಂಬ ರೈತರ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

‘ಸರ್ಕಾರದಿಂದ ಭೂಮಿ ಮಂಜೂರು ಮಾಡಿಕೊಟ್ಟ ನಂತರ ನಾವು, ನಮ್ಮ ಕುಟುಂಬದವರು, ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ. ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ. ಕೊರೊನಾ ಸಂಕಷ್ಟದ ಸಮಯದಲ್ಲೂ ನಾವು ತರಕಾರಿಗಳು ಬೆಳೆದು ಮಾರಾಟ ಮಾಡಿಕೊಂಡು ಎಲ್ಲರಿಗೂ ಊಟ ಕೊಟ್ಟಿದ್ದೇವೆ. ಈಗ ಇದ್ದಕಿದ್ದಂತೆ ನಮಗೆ ಮಾಹಿತಿಯನ್ನೆ ನೀಡದೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ.) ಯವರು ನೋಟೀಸ್ ಜಾರಿ ಮಾಡಿದ್ದು, ನಿಮ್ಮ ಭೂಮಿಯನ್ನು ನಾವು ಸ್ವಾಧೀನ ಪಡಿಸಿಕೊಳ್ಳುತ್ತಿದ್ದೇವೆ. ನಿಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ, ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಇದರಿಂದ ನಮಗೆ ಏನು ಮಾಡಬೇಕು ಎನ್ನುವ ಬಗ್ಗೆ ದಿಕ್ಕು ತೋಚದಂತಾಗಿದೆ’ ಎಂದು ಗ್ರಾಮಸ್ಥರು ಅಳಲುತೋಡಕೊಂಡರು.

ರೈತ ಮುಖಂಡ ಮೋಹನ್ ಮಾತನಾಡಿ, ‘ಸರ್ಕಾರದ ಅಧಿಕಾರಿಗಳಿಗೆ ರೈತರ ಭೂಮಿ ಬಿಟ್ಟರೆ, ಸರ್ಕಾರಿ ಭೂಮಿ ಸಿಗುವುದಿಲ್ಲವೇ? ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಕೈಗಾರಿಕೆಗಳಿಗೆ ಕೊಡಲಿ ಇದಕ್ಕೆ ನಮ್ಮ ವಿರೋಧವಿಲ್ಲ, ಹಲವಾರು ವರ್ಷಗಳಿಂದ ಇದೇ ಭೂಮಿಯನ್ನೆ ನಂಬಿಕೊಂಡು ಜೀವನ ಮಾಡುವವರ ಗತಿ ಏನಾಗಬೇಕು’ ಎಂದು ಪ್ರಶ್ನಿಸಿದರು.

ರೈತ ವೆಂಕಟರಮಣಪ್ಪ ಮಾತನಾಡಿ, ‘ಈ ಹಿಂದೆ ನಮ್ಮ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸುತ್ತಿದ್ದಾಗ, ಕೈಗಾರಿಕೆ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿ, ಈ ಭಾಗದಲ್ಲಿನ ರೈತರ ಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಯಾವುದೇ ಕಾರಣಕ್ಕೂ ರೈತರಿಂದ ಬಲವಂತವಾಗಿ ಕೈಗಾರಿಕೆಗಳಿಗೆ ಭೂಮಿ ಪಡೆಯುವುದಿಲ್ಲ ಎಂದು ಅವರು ಭರವಸೆ ನೀಡಿದ್ದರು. ಆದರೆ, ಈಗ ಯಾವ ರೈತರಿಗೂ ಮಾಹಿತಿ ನೀಡದೇ 4(1) ನೋಟೀಸ್ ಜಾರಿಗೊಳಿಸಿದ್ದಾರೆ. ಯಾವುದೇ ರೈತರು, ಆಕ್ಷೇಪಣೆ ಸಲ್ಲಿಸಲು ಕಚೇರಿಗೆ ಹೋದರೆ ಅವರಿಂದ ಸಹಿ ಪಡೆದುಕೊಂಡು ನಂತರವೇ ಆಕ್ಷೇಪಣೆ ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ರೈತರಿಂದ ದೌರ್ಜನ್ಯವಾಗಿ ಭೂಮಿಯನ್ನು ಕಸಿದುಕೊಳ್ಳುವುದು ಸರಿಯಲ್ಲ’ ಎಂದರು.

ಕೋರ್ಟ್ ಮೊರೆ ಹೋಗುತ್ತೇವೆ: ‘ನಾವು ಈಗಾಗಲೇ ಜಿಲ್ಲಾಧಿಕಾರಿ, ಶಾಸಕರು, ಕೈಗಾರಿಕಾ ಸಚಿವರು, ಕಂದಾಯ ಸಚಿವರು ಹೀಗೆ ಎಲ್ಲರಿಗೂ ಮನವಿಗಳು ಕೊಟ್ಟಿದ್ದೇವೆ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಧರಣಿಯನ್ನೂ ಮಾಡಿದ್ದೇವೆ. ಭೂ ಸ್ವಾಧೀನಕ್ಕಾಗಿ ಭೂಮಿಯನ್ನುಗುರುತಿಸುವಾಗ ಕನಿಷ್ಠ ರೈತರ ಬಗ್ಗೆ ಕಿಂಚಿತ್ತೂ ಕರುಣೆಯಿಲ್ಲದೆ ಗುರುತಿಸಿ, ಕೈಗಾರಿಕೋದ್ಯಮಿಗಳ ಪರವಾಗಿ ಅಧಿಕಾರಿಗಳು ಕೆಲಸ ಮಾಡಿರುವುದು ಗೊತ್ತಾಗುತ್ತಿದೆ. ಸರ್ಕಾರ, ಮತ್ತು ಕೆ.ಐ.ಎ.ಡಿ.ಬಿ.ಅಧಿಕಾರಿಗಳು ನಮ್ಮ ಗ್ರಾಮದ ರೈತರ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡದಿದ್ದರೆ, ನಾವು ಹೈಕೋರ್ಟ್ ಮೊರೆ ಹೋಗುವುದು ಖಚಿತ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ತ್ಯಾಗಕ್ಕೂ ಸಿದ್ಧ
ಕೈಗಾರಿಕೆಗಳ ಸ್ಥಾಪನೆಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಸಿ, ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನ ಮಾಡಿದರೆ, ನಾವು ಯಾವುದೇ ತ್ಯಾಗಕ್ಕೂ ಸಿದ್ಧ ಕಾನೂನು ಹೋರಾಟ ಮಾಡಿಯಾದರೂ ನಮ್ಮ ಭೂಮಿ ಉಳಿಸಿಕೊಳ್ಳಬೇಕಾಗಿರುವುದು ಅನಿವಾರ್ಯ.
-ಸಿ.ಬಿ.ಮೋಹನ್, ರೈತ, ಚನ್ನರಾಯಪಟ್ಟಣ

ನಮಗೆ ಹಣ ಬೇಕಾಗಿಲ್ಲ
ನಾವು ಯಾರೂ 5 ಎಕರೆ ಮೇಲೆ ಭೂಮಿ ಇಟ್ಟುಕೊಂಡಿಲ್ಲ, ಎಲ್ಲರೂ ಸಣ್ಣ ರೈತರೇ ಆಗಿದ್ದೇವೆ. ಸರ್ಕಾರ, ಸಣ್ಣ ರೈತರ ಮೇಲೆ ದಬ್ಬಾಳಿಕೆ ಮಾಡಿ, ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಯಾವ ರೈತರಿಗೂ ಹಣ ಬೇಕಾಗಿಲ್ಲ, ದುಡಿದು ತಿನ್ನುತ್ತಿರುವ ಭೂಮಿಯನ್ನು ನಮಗೆ ಉಳಿಸಿದರೆ ಸಾಕು.
-ಸಿ.ಎಂ. ಮಾರೇಗೌಡ, ರೈತ, ಚನ್ನರಾಯಪಟ್ಟಣ

ನಾವು ಎಲ್ಲಿಗೆ ಹೋಗಬೇಕು?
ನಮ್ಮ ತೋಟದಲ್ಲಿ ಶುಂಠಿ ಬೆಳೆ ಇಟ್ಟಿದ್ದೇನೆ. ಮನೆಯಲ್ಲಿರುವ 8 ಮಂದಿ ಇದ್ದು, ನಮಗಿರುವ ಒಂದು ಎಕರೆ ಭೂಮಿಯಲ್ಲಿ ಜೀವನ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರದವರು ಬಂದು ಏಕಾಏಕಿ ನೋಟೀಸ್ ಕೊಟ್ಟಾಗ ಗಾಬರಿಯಾಗಿದೆ. ಈಗ ಭೂಸ್ವಾಧೀನ ಮಾಡಿಕೊಂಡು ನಮ್ಮನ್ನು ಭೂಮಿಯಿಂದ ಹೊರಗೆ ಕಳಹಿಸಿದರೆ ನಾವು ಎಲ್ಲಿಗೆ ಹೋಗಬೇಕು, ನಮ್ಮ ಕುಟುಂಬಸ್ಥರೆಲ್ಲರೂ ಬೀದಿಗೆ ಬೀಳಬೇಕಾಗುತ್ತದೆ.
-ವೆಂಕಟರಮಣಪ್ಪ, ರೈತ, ಚನ್ನರಾಯಪಟ್ಟಣ

ನೆರವಿಗೆ ಬರಲಿ
ಸರ್ಕಾರ, ನಮ್ಮಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳಬಾರದು. ಜಿಲ್ಲಾಧಿಕಾರಿ ಸೇರಿದಂತೆ ಜನಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಬೇಕು. ಇಲ್ಲವಾದರೆ ನಾವು ಹೋರಾಟ ಮಾಡುವುದು ಶತಸಿದ್ಧ.
-ಕೃಷ್ಣಪ್ಪ, ರೈತ

ಮಕ್ಕಳ ಭವಿಷ್ಯಕ್ಕೆ ಹಿನ್ನಡೆ
ನಮ್ಮ ಜಮೀನಿನಲ್ಲಿ ಹುಳು ಸಾಕಾಣಿಕೆ ಮನೆ ಕಟ್ಟಿದ್ದೇವೆ. ವಾಸದ ಮನೆಗಳನ್ನೂ ಕಟ್ಟಿಕೊಂಡಿದ್ದೇವೆ. ಈಗ ಏಕಾಏಕಿ ಜಮೀನು ಖಾಲಿ ಮಾಡಿಸಿ, ಮನೆಗಳನ್ನೂ ಖಾಲಿ ಮಾಡಿಸಿದರೆ ಮುಂದೆ ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನ ಮಾಡಿಕೊಳ್ಳಬಾರದು.
-ಶ್ರೀನಿವಾಸ್, ರೈತ, ಚನ್ನರಾಯಪಟ್ಟಣ

ರೈತರ ಪೀಳಿಗೆ ನಶಿಸುತ್ತೆ
ರೈತರ ಜೀವನಕ್ಕಾಗಿ ಭೂಮಿ ಕೊಡಿಸಲಿಕ್ಕಾಗಿ ನಾವು ಸಾಕಷ್ಟು ಹೋರಾಟಗಳು ಮಾಡಿ, ವೃತ್ತಿ ಜೀವನವನ್ನೆ ಕಳೆದುಕೊಂಡಿದ್ದೇವೆ. ಈಗ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ, ರೈತರ ಪೀಳಿಗೆ ನಶಿಸುತ್ತದೆ. ಆದ್ದರಿಂದ ಸರ್ಕಾರ ಈ ರೈತರ ಜೀವ ಉಳಿಸುವಂತಹ ಕೆಲಸವಾಗಬೇಕು.
-ಸಿದ್ದಾರ್ಥ, ಹೋರಾಟಗಾರ, ದೇವನಹಳ್ಳಿ

ಮನವಿ ಸರ್ಕಾರಕ್ಕೆ ಕಳಿಸಿದ್ದೇವೆ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂಸ್ವಾಧೀನ ಮಾಡಿಕೊಳ್ಳಲಿಕ್ಕಾಗಿ ರೈತರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲಿಕ್ಕಾಗಿ ಅವಕಾಶ ಕೊಟ್ಟಿದ್ದಾರೆ. ರೈತರೂ ನಮಗೆ ಮನವಿ ಸಲ್ಲಿಸಿ, ಭೂಮಿಯನ್ನು ಉಳಿಸಿಕೊಡುವಂತೆ ಮನವಿ ಮಾಡಿದ್ದಾರೆ. ರೈತರ ಮನವಿಯನ್ನು ನಾವು ಸರ್ಕಾರಕ್ಕೆ ಕಳುಹಿಸಿದ್ದೇವೆ. ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ನಾವೂ ಕಾದು ನೋಡುತ್ತಿದ್ದೇವೆ. ಭೂಮಿಯನ್ನು ಗುರ್ತಿಸುವುದು ನಮ್ಮ ಕೆಲಸವಲ್ಲ.
-ಅನಿಲ್ ಕುಮಾರ್ ಅರೋಲಿಕರ್, ತಹಶೀಲ್ದಾರ್, ದೇವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT