ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಈಡೇರದ ಭರವಸೆ: ಜನರಿಂದ ಬಹಿಷ್ಕಾರದ ಅಸ್ತ್ರ

ಸೌಕರ್ಯ ಕೊರತೆ; ಮತದಾನ ಬಹಿಷ್ಕಾರ ಬೆದರಿಕೆ l ಗ್ರಾಮಗಳಲ್ಲಿ ಬ್ಯಾನರ್‌; ಸಮಸ್ಯೆಗಳ ಪಟ್ಟಿ
Published 8 ಏಪ್ರಿಲ್ 2024, 5:04 IST
Last Updated 8 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣಾ ಪ್ರಚಾರ ಸಭೆಗಳು ಆರಂಭ ಆಗುತ್ತಿರುವ ಬೆನ್ನಲ್ಲೇ ತಾಲ್ಲೂಕಿನ ವಿವಿಧೆಡೆಗಳಲ್ಲಿ ಜನಪ್ರತಿನಿಧಿಗಳ ಭರವಸೆ ನಂಬಿ, ಮೂಲ ಸೌಕರ್ಯದಿಂದ ವಂಚಿತರಾಗಿರುವ ಜನ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಅಸ್ತ್ರ ಉಪಯೋಗಿಸಲು ಸಜ್ಜಾಗಿದ್ದಾರೆ.

ಗ್ರಾಮಗಳಲ್ಲಿ ಬಹಿಷ್ಕಾರದ ಎಚ್ಚರಿಕೆಯ ಬ್ಯಾನರ್‌ ಕಟ್ಟಿ, ಸಮಸ್ಯೆ ಸರಮಾಲೆಯ ಪಟ್ಟಿಮಾಡುತ್ತಿದ್ದಾರೆ. ಕೆಲವರು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.

ಸತತ ಹೋರಾಟ, ಮನವಿ ಸಲ್ಲಿಕೆ ನಂತರವು ಸಹ ಜನಪ್ರತಿನಿಧಿಗಳು, ಅಧಿಕಾರಿಗಳು ಕನಿಷ್ಠ ಶುದ್ಧ ಕುಡಿಯುವ ನೀರಿನ ಮನವಿಯನ್ನು ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದಾಗ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಜರಾಹೊಸಹಳ್ಳಿ, ದೊಡ್ಡತುಮಕೂರು ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಜನರು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್‌ ಕಟ್ಟಿದರು. ಇದರಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ಗ್ರಾಮಗಳಿಗೆ ಭೇಟಿ ನೀಡಿ ದೂರದ ಜಕ್ಕಲಮೊಡಗು ಜಲಾಶಯದಿಂದ ನಗರಕ್ಕೆ ಬರುವ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುವ ಭರವಸೆ ನೀಡಿತು.

ಚುನಾವಣೆ ನಂತರ ಈ ಗ್ರಾಮಗಳ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳಿಂದ ಹರಿದು ಬರುವ ಕಲುಷಿತ ನೀರನ್ನು ಶುದ್ಧೀಕರಿಸಿದ ನಂತರ ಕೆರೆಗಳಿಗೆ ಹರಿಸುವ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೂ ಅಧಿಕಾರಿಗಳು ನೀಡಿರುವ ಭರವಸೆ ಮಾತಿನಲ್ಲೇ ಉಳಿದಿದೆಯೇ ವಿನಹ ವಾಸ್ತವದಲ್ಲಿ ಜಾರಿಯಾಗಿಲ್ಲ ಎಂದು ಆರೋಪಿಸಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ವತಿಯಿಂದ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಕೆಐಎಡಿಬಿ ವತಿಯಿಂದ ಕೊನಘಟ್ಟ, ನಾಗದೇನಹಳ್ಳಿ ಸುತ್ತಮುತ್ತ ವಿವಿಧ ಹಣ್ಣು ತರಕಾರಿ ಗಳನ್ನು ಬೆಳೆಯುತ್ತಿರುವ ಫವತ್ತಾದ 971 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಇದರ ವಿರುದ್ಧ ರೈತರು 75 ದಿನಗಳಿಂದಲು ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ. ಆದರೆ ಇದುವರೆಗೂ ಅಧಿಕಾರಿಗಳು, ಜನ ಪ್ರತಿನಿಧಿಗಳಿಂದ ಭರವಸೆಯ ಹೊರತು ರೈತರಿಗೆ ಬೇರೆ ಯಾವುದೇ ರೀತಿಯ ಪ್ರತಿಸ್ಪಂದನೆ ದೊರೆತಿಲ್ಲ. ಹಾಗಾಗಿ ನಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳದ ಜನಪ್ರತಿನಿಧಿಗಳಿಗೆ ಮತ ಚಲಾಯಿಸುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ರೈತರಲ್ಲಿ ಮೂಡಿದೆ.

ತಾಲ್ಲೂಕಿನಲ್ಲಿ ಮತದಾನ ಬಹಿಷ್ಕಾರದ ಸರಣಿಗಳು ಪ್ರಾರಂಭವಾಗುತ್ತಿವೆ. ಚುನಾವಣಾ ಸಂದರ್ಭದಲ್ಲಿ ಮತದಾನ ಬಹಿಷ್ಕಾರದಂತಹ ಪ್ರಕರಣಗಳಿಗೆ ರಾಜ್ಯ ಚುನಾವಣ ಆಯೋಗದ ಅಧಿಕಾರಿಗಳು ಸೇರಿದಂತೆ ಮೇಲಾಧಿಕಾರಿಗಳಿಗೆ ಉತ್ತರಿಸಲೇ ಬೇಕಾದ ಅನಿವಾರ್ಯ ಸ್ಥಿತಿ ತಾಲ್ಲೂಕು ಹಂತದ ಅಧಿಕಾರಿಗಳದ್ದು. ಆದರೆ ವಾಸ್ತದಲ್ಲಿ ಹಲವಾರು ರಾಜಕೀಯ ಲೆಕ್ಕಾಚಾರ, ಒತ್ತಡದ ಕಾರಣಗಳಿಂದಾಗಿ ಸಮಸ್ಯೆ ಪರಿಹರಿಸುವ ಪ್ರಮಾಣಿಕ ಪ್ರಯತ್ನಕ್ಕೆ ಅಧಿಕಾರಿಗಳ ಕೈ ಕಟ್ಟಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT