ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಒತ್ತು

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಮಹೇಶ್‌ ಜೋಶಿ
Last Updated 29 ಅಕ್ಟೋಬರ್ 2020, 3:44 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕನಸು ಹೊತ್ತಿದ್ದು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಸ್ಪರ್ಧಿಸುವುದಾಗಿ ದೂರದರ್ಶನದ ವಿಶ್ರಾಂತ ಮಹಾನಿರ್ದೇಶಕ ಡಾ.ಮಹೇಶ್ ‌ಜೋಶಿ ಹೇಳಿದರು.

ಪಟ್ಟಣದ ಬಸವೇಶ್ವರ ಬಡಾವಣೆ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.

‘ಪರಿಷತ್‌ನ‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್‌ ಮತ್ತಷ್ಟು ಬದಲಾಗಬೇಕಿದ್ದು ಕನ್ನಡಿಗರ ಸಂಪೂರ್ಣ ಸಹಕಾರ ಕೋರುತ್ತೇನೆ’ ಎಂದರು.

ಕನ್ನಡ ಭಾಷೆ, ನಾಡು, ಗಡಿ, ನೆಲ, ಜಲ, ಕನ್ನಡ ಶಾಲೆಗಳ ಸ್ಥಿತಿಗತಿ, ಕನ್ನಡಿಗರಿಗೆ ಉದ್ಯೋಗ ಸಮಸ್ಯೆ ಅಳವಾಗಿ ಅರಿತಿದ್ದು, ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವ ಆಸೆ ಇಟ್ಟುಕೊಂಡಿದ್ದೇನೆ. ಮಹಿಳೆಯರಿಗೆ ಆದ್ಯತೆ ನೀಡಿ ಕಸಾಪ ಕಾರ್ಯಕ್ರಮಗಳಲ್ಲಿ ಸಕ್ರಿಯಗೊಳಿಸುವಂತಹ ಚಿಂತನೆ ನಡೆಸಿದ್ದೇನೆ. ಯುವ ಕವಿಗಳು, ಬರಹಗಾರರು, ಸೇರಿದಂತೆ ತೆರೆಮರೆಯಲ್ಲಿನ ಕವಿಗಳಿಗೆ ವೇದಿಕೆ ಕಲ್ಪಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ರಾಜ್ಯದ ಪ್ರತಿ ಭಾಗ, ಗ್ರಾಮಗಳಲ್ಲಿನ ಸ್ಥಳದ ಮಹಿಮೆ, ಸಾಹಿತ್ಯ, ಸಾಧನೆ ಕುರಿತು ಫಲಕಗಳನ್ನು ಅಳವಡಿಸಿ ಪ್ರತಿಯೊಬ್ಬರಿಗೂ ಅಲ್ಲಿನ ವಿಶೇಷದ ಬಗ್ಗೆ ಅರಿವು ಮೂಡಿಸಲಾಗುವುದು. ಅರ್ಹತೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಆಧಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯ ನಿರ್ವಹಿಸಬೇಕಿದೆ ಎಂದರು.

7,095 ಮತದಾರರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2018ರ ಅನ್ವಯ ಒಟ್ಟು 7,095 ಮಂದಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಮತದಾರರಿದ್ದಾರೆ. ತಾಲ್ಲೂಕುವಾರು ದೇವನಹಳ್ಳಿ- 2851, ದೊಡ್ಡಬಳ್ಳಾಪುರ- 2156, ನೆಲಮಂಗಲ- 1120, ಹೊಸಕೋಟೆ-955 ಮತದಾರರಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವವರ ಸಂಖ್ಯೆ ಹೆಚ್ಚಿಸಲು ಜಾಗೃತಿ ಮೂಡಿಸಬೇಕಿದೆ ಎಂದರು.

ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪರಿಚಾರಕ ರಂತೆ ಕಾರ್ಯ ನಿರ್ವಹಿಸುವವರು ಕಸಾಪದ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಬೇಕಿದೆ. ಮೇಲ್ಮಟ್ಟದ ಸಾಹಿತ್ಯ ಸೃಷ್ಟಿ, ಹೆಚ್ಚಿನ ಸಂಶೋಧನೆಗಳಿಗೆ ಅವಕಾಶ ಸಿಗಬೇಕಿದೆ ಎಂದರು.

ರಾಷ್ಟ್ರೀಯ ಯುವ ಯೋಜನೆ ರಾಜ್ಯ ಘಟಕದ ಸಂಯೋಜಕ ವಿ. ಪ್ರಶಾಂತ್, ಶಿಡ್ಲಘಟ್ಟ ತಾಲ್ಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಆಂಜನೇಯ, ಜಿಲ್ಲಾ ಘಟಕದ ಕಸಾಪ ಗೌರವಾಧ್ಯಕ್ಷ ವಿ.ಎನ್. ಸೂರ್ಯಪ್ರಕಾಶ್, ದೇವನಹಳ್ಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮ. ಸುರೇಶ್ ಬಾಬು, ಸಾಹಿತಿ ಲಕ್ಷ್ಮಿ ಶ್ರೀನಿವಾಸ್, ರಂಗರಾಜಶೆಟ್ಟಿ, ಸಿದ್ಧಗಂಗಮ್ಮ, ಶಿಕ್ಷಕ ಬಿ.ವಿ. ಗೋವಿಂದಪ್ಪ, ಶಿವಾಜಿರಾವ್ ನರಗುಂದ, ಅಕ್ಷಯ್, ಗಗನ್, ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT