‘ವ್ಯವಹಾರ ಜ್ಞಾನ ವೃದ್ಧಿಸುವ ಮೆಟ್ರಿಕ್ ಮೇಳ’

ಶುಕ್ರವಾರ, ಜೂಲೈ 19, 2019
22 °C
ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ

‘ವ್ಯವಹಾರ ಜ್ಞಾನ ವೃದ್ಧಿಸುವ ಮೆಟ್ರಿಕ್ ಮೇಳ’

Published:
Updated:
Prajavani

ವಿಜಯಪುರ : ಪ್ರತಿನಿತ್ಯ ಕೈಗಳಲ್ಲಿ ಪುಸ್ತಕಗಳು, ಪೆನ್ನುಗಳನ್ನು ಹಿಡಿದು ಬಂದು ಶಾಲೆಯ ಕೊಠಡಿಯಲ್ಲಿ ಕುಳಿತುಕೊಂಡು ಶಿಕ್ಷಕರು ಹೇಳುವ ಪಾಠ ಕೇಳುತ್ತಿದ್ದ ಮಕ್ಕಳು, ಶಾಲಾವರಣದಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠಗಳು, ಲೆಕ್ಕಗಳನ್ನು ಕ್ರಿಯಾತ್ಮಕ ರೂಪವಾಗಿ ಪರಿವರ್ತನೆ ಮಾಡಿಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.

‘ಸರ್ ಬನ್ನಿ ..ಬಿಸಿ ಬಿಸಿ ವಡೆ ತಗೊಳ್ಳಿ ಚಳಿಗೆ ಒಳ್ಳೆಯದು.. ಪಾನಿಪೂರಿ ತಿನ್ನಿ ಸರ್..ಸರ್ ಹಣ್ಣು ತಿನ್ನಿ. ಆರೋಗ್ಯಕ್ಕೆ ಒಳ್ಳೆಯದು..ಅಣ್ಣ ಬನ್ನಿ ತಾಜಾ ತಾಜಾ ತರಕಾರಿ ಕಡಿಮೆ ಬೆಲೆ..ಹೆಚ್ಚು ತೂಕ ಬನ್ನಿ ತಗೊಳ್ಳಿ’ ಎಂದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ 2019-20 ನೇ ಸಾಲಿನ ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ ಮಕ್ಕಳು, ನಗರದಲ್ಲಿ ನಡೆಯುವ ವಾರದ ಸಂತೆಯಲ್ಲಿನ ವ್ಯಾಪಾರಿಗಳನ್ನೂ ಮೀರಿಸುವಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.

ಬಗೆ ಬಗೆಯ ತಾಜಾ ತರಕಾರಿಗಳು, ಬಣ್ಣ ಬಣ್ಣದ ಉಡುಪುಗಳು, ಕ್ರೀಡಾ ಸಾಮಗ್ರಿಗಳು, ವಿವಿಧ ಖಾದ್ಯಗಳು ಮತ್ತು ಸೌಂದರ್ಯ ವರ್ಧಕಗಳು, ಚಿಣ್ಣರ ಚೀರಾಟ ಇದೆಲ್ಲ ಕಂಡು ಬಂದವು. ಶಾಲಾ ಆವರಣ ಶುಕ್ರವಾರದ ಮಟ್ಟಿಗೆ ಮಿನಿ ಬಜಾರ್ ನಿರ್ಮಾಣವಾದಂತೆ ಭಾಸವಾಗಿತ್ತು. ಮೆಟ್ರಿಕ್ ಮೇಳದ ಅಂಗವಾಗಿ ವಿವಿಧ ಶಾಲೆಗಳ, ತರಗತಿಗಳ ವಿದ್ಯಾರ್ಥಿಗಳು ದಿನದ ಮಟ್ಟಿಗೆ ಪಕ್ಕಾ ವ್ಯಾಪಾರಿಗಳಾಗಿ ಮಾರ್ಪಟ್ಟಿದ್ದರು.

ಗ್ರಾಹಕರನ್ನು ಸೆಳೆಯಲು ಕೆಲವು ಮಕ್ಕಳು ಅಗ್ಗದ ಬೆಲೆಗೆ ವಸ್ತುಗಳನ್ನು ಕೂಗಿ ಕರೆದರೆ ಮತ್ತೆ ಕೆಲ ಮಕ್ಕಳು ಎರಡು ವಸ್ತು ಕೊಂಡರೆ ಒಂದು ಉಚಿತ ಎಂಬ ಆಕರ್ಷಣೆಯ ತಂತ್ರ ಉಪಯೋಗಿಸಿದರು. ಮಾಮೂಲು ಸಂತೆಯಂತೆ ಚೌಕಾಸಿ ವ್ಯಾಪಾರವೂ ನಡೆಯಿತು.

ಕೆಲವು ಮಳಿಗೆಗಳ ಮಾಲೀಕ ಮಕ್ಕಳಂತೂ ಚತುರ ವ್ಯವಹಾರಸ್ಥರಂತೆ ವ್ಯಾಪಾರ ವಹಿವಾಟು ನಡೆಸಿದರು. ಶಾಲಾ ಮಕ್ಕಳ ಪೋಷಕರಲ್ಲದೆ, ಶಾಲೆಯ ಸುತ್ತಲಿನ ನಾಗರಿಕರೂ ಈ ಮಕ್ಕಳ ಸಂತೆಗೆ ಬಂದು ಖರೀದಿ ನಡೆಸಿದರು.

ಮೇಳ ಉದ್ಘಾಟಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಜಾತಿ ಮತದ ಭೇದ ಭಾವ ತೊರೆದು ವಿಶ್ವಮಾನವರಾಗಿ ಬೆಳೆಯಬೇಕು. ವ್ಯಾಪಾರವನ್ನು ಮಾಡುವ ಮೂಲಕ ತಮ್ಮ ಜ್ಞಾನದ ಅರಿವು ಹೆಚ್ಚಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸುವ ಮತ್ತು ಹಣ ಚಲಾವಣೆಯಾಗುವ ರೀತಿಯನ್ನು ತಿಳಿಸುವ ಉದ್ದೇಶದಿಂದ ಮೆಟ್ರಿಕ್ ಮೇಳ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು. ಲಾಭದ ಒಂದು ಭಾಗವನ್ನು ದುರ್ಬಲರಿಗೆ ನೆರವಾಗುವ ಉದ್ದೇಶಗಳಿಗೆ ಬಳಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರಾವೀರೇಗೌಡ ಮಾತನಾಡಿ, ಸದಾ ಶಾಲೆ, ಓದು, ಪರೀಕ್ಷೆ ಹೀಗೆ ಒತ್ತಡದಲ್ಲೇ ಇರುವ ಮಕ್ಕಳ ಪ್ರಬುದ್ಧತೆಯನ್ನು ಪ್ರದರ್ಶಿಸುವ ಮೂಲಕ ಆರ್ಥಿಕ ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳಲು, ಮನೋಲ್ಲಾಸಕ್ಕೆ ಮೆಟ್ರಿಕ್ ಮೇಳ ಸಹಕಾರಿಯಾಗುತ್ತದೆ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ಸ್ಪರ್ಧಾ ಜಗತ್ತಿನಲ್ಲಿ ಪುಸ್ತಕದ ಜ್ಞಾನದ ಜತೆಗೆ ಪ್ರಾಪಂಚಿಕ ವ್ಯವಹಾರದ ಜ್ಞಾನವೂ ಅಗತ್ಯ. ಒಂದು ದಿನದ ಮಟ್ಟಿಗೆ ಮಕ್ಕಳು ಉಲ್ಲಾಸದಿಂದ ಮೆಟ್ರಿಕ್ ಮೇಳದಲ್ಲಿ ಭಾಗವಹಿಸಿದ್ದಾರೆ. ನಾವು ಪೋಷಕರಾಗಿ ಉತ್ತೇಜನ ನೀಡುತ್ತಿದ್ದೇವೆ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾರ್ಟಿನ್, ಉಪಪ್ರಾಂಶುಪಾಲ ಪಿ.ವೆಂಕಟೇಶ್, ಚಿಕ್ಕನಹಳ್ಳಿ ಸುಬ್ಬಣ್ಣ, ಕೆ.ಸದಾಶಿವಯ್ಯ, ಕೆ.ಮಂಜುನಾಥ್, ಭಾರತಿಮುನಿಕೃಷ್ಣಪ್ಪ, ಕೆಂಚೇಗೌಡ, ಡಾ.ರಮೇಶಪ್ಪ, ಪಿ.ಎಂ.ಕೊಟ್ರೇಶ್, ಬಿ.ಎಸ್.ನಾರಾಯಣ್, ರಾಮಾಂಜು, ಪರಶುರಾಮಪ್ಪ, ಶೈಲಜಾ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !