ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ಗೆ ಅವಕಾಶ ಬೇಡ: ಶಾಸಕರ ಮನವಿ

Last Updated 7 ಮೇ 2020, 10:28 IST
ಅಕ್ಷರ ಗಾತ್ರ

ದೇವನಹಳ್ಳಿ: ವಿದೇಶದಿಂದ ಬರುವ ಪ್ರಯಾಣಿಕರನ್ನು ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಕ್ವಾರಂಟೈನ್‌ಗೊಳಪಡಿಸಲು ಅವಕಾಶ ನೀಡಬಾರದು ಎಂದು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದ ಶಾಸಕರು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರಗೆ ಮನವಿ ಮಾಡಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಆಡಳಿತ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ದೇವನಹಳ್ಳಿ ಜಿಲ್ಲಾ ಕೇಂದ್ರವಾಗಿರುವ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಭಾರತದ ವಿವಿಧ ರಾಜ್ಯಗಳಿಗೆ ವಿದೇಶದಿಂದ ಬರುವ ಪ್ರಯಾಣಿಕರನ್ನು ಜಿಲ್ಲೆಯ ವಿವಿಧ ವಸತಿ ಗೃಹ, ಕಾಲೇಜು, ಕಲ್ಯಾಣ ಮಂಟಪಗಳಲ್ಲಿ ಇರಿಸಿದರೆ ಸೋಂಕು ಹರಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ವಿದೇಶದಿಂದ ಬರುತ್ತಿರುವವರು ನಮ್ಮ ದೇಶದವರೇ. ಗ್ರಾಮಾಂತರ ಜಿಲ್ಲೆಯಲ್ಲಿಗೆ ಸೇರಿರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲು‌ ಅಭ್ಯಂತರವಿಲ್ಲ. ಬೇರೆ ಜಿಲ್ಲೆಯ ಪ್ರಯಾಣಿಕರನ್ನು ಒಳಪಡಿಸಬಾರದು. ಆಯಾ ಜಿಲ್ಲೆಯಲ್ಲಿಯೇ ಕ್ವಾರಂಟೈನ್‌ ಒಳಪಡಿಸುವುದು ಸೂಕ್ತ. ಒಂದು ವೇಳೆ ಎಲ್ಲರನ್ನೂ ಇಲ್ಲಿಯೇ ಇರಿಸಿದರೆ ನಾಲ್ಕು ವಿಧಾನ ಸಭಾ ಕ್ಷೇತ್ರದ ಶಾಸಕರು ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ದೊಡ್ಡಬಳ್ಳಾಪುರ ಶಾಸಕ ವೆಂಟಕರಮಣಯ್ಯ ಮಾತನಾಡಿ, ವಸತಿ ಶಾಲೆ, ಲಾಡ್ಜ್, ಕಲ್ಯಾಣ ಮಂಟಪಗಳ ಪಕ್ಕದಲ್ಲಿ ಹೊಂದಿಕೊಂಡಂತೆ ಬಡಾವಣೆಗಳಿವೆ. ಪರೀಕ್ಷೆ ನಡೆಸಿದ ನಂತರವೂ ಸೋಂಕು ಇಲ್ಲ ಎಂದರೂ ಕಾಲಕ್ರಮೇಣ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವಕಾಶ ನೀಡಬಾರದು ಎಂದು ಹೇಳಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಸರ್ಕಾರದ ಮಾಹಿತಿಯಂತೆ 10 ರಿಂದ 12 ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವವರಿದ್ದಾರೆ.ಈಗಾಗಲೇ 45 ದಿನಗಳ ಲಾಕ್ ಡೌನ್ ನಿಂದ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಶೇಕಡ 60 ರಷ್ಟು ಗೈರಾಗುತ್ತಿದ್ದಾರೆ. ಅಷ್ಟೊಂದು ಪ್ರಯಾಣಿಕರ ಹೊರೆಯನ್ನು ಸರ್ಕಾರ ಜಿಲ್ಲಾಡಳಿತ ಮೇಲೆ ಹೇರಿದರೆ ಹೇಗೆ ? ಕ್ವಾರಂಟೈನ್ ಪ್ರಕ್ರಿಯೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.

ಲಾಕ್ ಡೌನ್ ಸಡಿಲದಿಂದ ಸಾರ್ವಜನಿಕರ ಪ್ರತಿಯೊಂದು ಕಾರ್ಯಚಟುವಟಿಕೆ ಆರಂಭಗೊಂಡಿದೆ ಕೈಗಾರಿಕಾ ಕ್ಷೇತ್ರವು ಹೊರತಲ್ಲ ಈಗಾಗಲೇ ಸರ್ಕಾರದೊಂದಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ, ಜಿಲ್ಲಾಧಿಕಾರಿ ಯಾದ ನೀವು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.

ಶಾಸಕರ ಮನವಿಯನ್ನು ಸ್ವಿಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮಗೆ ಬಂದಿರುವ ಮಾಹಿತಿಯಂತೆ 10,500 ಪ್ರಯಾಣಿಕರು ಬರುವ ಸಾಧ್ಯತೆ ಇದೆ, ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಕ್ವಾರೆಂಟೈನ್ ಮಾಡುವ ಉದ್ದೇಶ ನಮ್ಮದಲ್ಲ, ಪ್ರಸ್ತುತ 6.500 ಪ್ರಯಾಣಿಕರನ್ನು ಕ್ವಾರೆಂಟೈನ್ ಮಾಡಲು ಬೆಂಗಳೂರು ನಗರದ ವಿವಿಧ ಸ್ಟಾರ್ ಹೋಟಲ್‌ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ, ಒಂದೊಂದು ಹೋಟಲ್‌ನಲ್ಲಿ 200 ರಿಂದ 250 ಕೊಠಡಿಗಳಿವೆ, ಆರೋಗ್ಯ ಸಿಬ್ಬಂದಿ, ಪೊಲೀಸರು, ಟಾಸ್ಕ್ ಪೊರ್ಸ್‌ಗಳು 14 ದಿನಗಳ ಕಾಲ ಕ್ವಾರೆಂಟೇನ್‌ಗೆ ನಿಗಧಿ ಪಡಿಸಿರುವ ಸ್ಥಳದಲ್ಲಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ, ಪ್ರಯಾಣಿಕರಿರುವ ಕೊಠಡಿಯಲ್ಲಿ ಕುಟುಂಬದ ಸದಸ್ಯರನ್ನು ಬಿಡುವುದಿಲ್ಲ, ನಿಗಾ ವ್ಯವಸ್ಥೆ ಕಟ್ಟು ನಿಟ್ಟಾಗಿ ಇರಲಿದೆ ಕ್ವಾರೆಂಟೇನ್‌ಗೆ ಒಳಗಾಗುವ ಪ್ರಯಾಣಿಕರೆ ಊಟ ಉಪಹಾರ ಇತರೆ ಬಳಕೆ ವಸ್ತುಗಳಿಗೆ ಹಣ ನೀಡಬೇಕು, ಸರ್ಕಾರ ಬಿಡಗಾಸು ನೀಡುವುದಿಲ್ಲ ಎಂದು ಹೇಳಿದರು.ಕ್ವಾರೆಂಟೇನ್‌ಗೆ ಒಳ ಪಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ನಗರದಲ್ಲಿ ಸ್ಥಳದ ಕೊರತೆ ಕಂಡು ಬಂದ ಮೇಲೆ ಬೇರೆ ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ಲೆಕ್ಕೆಚಾರ ಅಷ್ಟೆ, ವಿಮಾನ ನಿಲ್ದಾಣದಲ್ಲಿ 20 ಬಸ್‌ಗಳನ್ನು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಬರುವವರನ್ನು ಅಲ್ಲಿಂದ ನೇರವಾಗಿ ಬೆಂಗಳೂರು ನಗರಕ್ಕೆ ಕರೆದೊಯ್ಯಲಾಗುವುದೆಂದು ಹೇಳಿದರು. ನೆಲಮಂಗಲ ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT