ಗುರುವಾರ , ಆಗಸ್ಟ್ 22, 2019
27 °C

‘ಸ್ವಚ್ಛತೆ ಜತೆ ಶ್ರಮದಾನ ಮಾಡಲು ಪ್ರೇರೇಪಿಸಿ’

Published:
Updated:
Prajavani

ವಿಜಯಪುರ: ಸ್ವಚ್ಛತೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದರ ಜತೆಗೆ ಶ್ರಮದಾನ ಮಾಡಲು ಅವರನ್ನು ಪ್ರೇರೇಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ರೂಬಿ ಆಂಗ್ಲ ಶಾಲೆಯ ವ್ಯವಸ್ಥಾಪಕ ಸೈಯದ್ ರಫೀಕ್ ಹೇಳಿದರು.

ಇಲ್ಲಿನ ರೂಬಿ ಆಂಗ್ಲಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಪಠ್ಯಪುಸ್ತಕಗಳಲ್ಲಿ ಕಲಿಯುವ ಕಲಿಕೆಯಷ್ಟೇ ಶಿಕ್ಷಣವಲ್ಲ. ಪಠ್ಯೇತರ ಚಟುವಟಿಕೆಗಳಿಂದ ಸಿಗುವಂತಹ ಶಿಕ್ಷಣ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತದೆ’ ಎಂದು ಸಲಹೆ ನೀಡಿದರು.

‘ಆರೋಗ್ಯವಂತ ಸಮಾಜ, ದೇಶ ನಿರ್ಮಾಣವಾಗಬೇಕಾದರೆ, ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಶಾಲೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಸ್ವಚ್ಛತೆ, ರಾಷ್ಟ್ರೀಯತೆಯ ಕುರಿತು ಅರಿವು ಮೂಡಿಸಲಾಗುತ್ತದೆ’ ಎಂದರು.

‘ಮಕ್ಕಳು ವಿದ್ಯಾರ್ಥಿಯ ದೆಸೆಯಲ್ಲೆ ಅವರಿಗೆ ಪರಿಸರ ಸಂರಕ್ಷಣೆ, ಸ್ವಚ್ಛತೆ ನೀರಿನ ಸಂರಕ್ಷಣೆ ಸೇರಿದಂತೆ ಪರೋಪಕಾರದ ಗುಣಗಳನ್ನು ಅವರಲ್ಲಿ ಬೆಳೆಸಿದಾಗ ಅವರಲ್ಲಿ ಉತ್ತಮ ಸಂಸ್ಕಾರದ ಜತೆಗೆ ಹೊಣೆಗಾರಿಕೆ ಬರುತ್ತದೆ. ಇದು ಅವರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತದೆ’ ಎಂದು ಹೇಳಿದರು.

ಶಾಲಾ ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಛ ಮಾಡಿ ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವ ಸಿದ್ಧತೆ ಮಾಡಿದರು. ಮುಖ್ಯ ಶಿಕ್ಷಕಿ ನಿಖತ್‌ ಸಲ್ಮಾ, ಸಹಶಿಕ್ಷಕಿ ವೀಣಾ ಸೇರಿದಂತೆ ಶಿಕ್ಷಕರೂ ಮಕ್ಕಳಿಗೆ ಸಾಥ್ ನೀಡಿದರು.

Post Comments (+)