ದೊಡ್ಡಬಳ್ಳಾಪುರ: ಹಾಲು ಉತ್ಪಾದಕ ರೈತರ ಕುಂದು ಕೊರತೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪ್ರತಿ ವರ್ಷವು ತಾಲ್ಲೂಕು ಮಟ್ಟದಲ್ಲಿ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರ ಪ್ರಾದೇಶಿಕ ಸಭೆ ನಡೆಸಲಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಹೇಳಿದರು.
ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಗುರುವಾರ ನಡೆದ ಎಂಪಿಸಿಎಸ್(ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳು) ರೈತರ ಪ್ರಾದೇಶಿಕ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಹಾಲು ಉತ್ಪಾದಕರ ಸಂಘಗಳ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಪ್ರಶಂಸನಾ ಪತ್ರ, ಬಹುಮಾನ ನೀಡುವ ಮೂಲಕ ಗೌರವಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಉತ್ತಮ ಸ್ಥಿತಿಯಲ್ಲಿದ್ದು, ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.
ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ರೈತರು ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ಬಮೂಲ್ ಅಧ್ಯಕ್ಷ ರಾಜಕುಮಾರ್, ಶಿಬಿರ ಕಚೇರಿ ವ್ಯವಸ್ಥಾಪಕ ಡಾ.ವಿ.ನಾಗರಾಜು, ಪಶುವೈದ್ಯ ಡಾ. ಜಿಯಾಉಲ್ಲಾ, ಡಾ.ಶ್ರೀಧರ್, ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ರವಿಂದ್ರಕುಮಾರ್, ಉಪಾಧ್ಯಕ್ಷ ಎಂ.ಡಿ.ದೇವರಾಜು ಇದ್ದರು.