ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರುಂಡ ಕತ್ತರಿಸಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ರುಂಡ, ಕೈ, ಕಾಲು ಕತ್ತರಿಸಿ ಕೊಂಡೊಯ್ದಿರುವ ಹಂತಕರು: ಗೋಣಿಚೀಲದಲ್ಲಿ ನಗ್ನ ಮುಂಡ: ಬಿಹಾರ ಯುವಕರ ಕೃತ್ಯ ಎಸಗಿರುವ ಶಂಕೆ
Published 1 ಜೂನ್ 2023, 22:02 IST
Last Updated 2 ಜೂನ್ 2023, 0:04 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ಜನತಾ ಕಾಲೊನಿಯಲ್ಲಿ ಒಂಟಿ ಮಹಿಳೆಯನ್ನು ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಹಿಳೆಯನ್ನು ಕೊಂದ ಹಂತಕರು ಕೈ, ಕಾಲು ಮತ್ತು ರುಂಡವನ್ನು ಕತ್ತರಿಸಿ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ನಗ್ನ ಮುಂಡವನ್ನು ಮಾತ್ರ ಗೋಣಿ ಚೀಲದಲ್ಲಿಟ್ಟು ಹೋಗಿದ್ದಾರೆ.

ಹತ್ಯೆಯಾಗಿರುವ ಮಹಿಳೆಯನ್ನು ಖಾಸಗಿ ಕಂಪನಿಯೊಂದರಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೀತಮ್ಮ ಎಂದು ಗುರುತಿಸಲಾಗಿದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಮದುವೆಯಾಗಿ ಗಂಡನ ಜೊತೆ ವಾಸವಾಗಿದ್ದಾರೆ.

ಪತಿಯ ಸಾವಿನ ನಂತರ ಈಚೆಗೆ ಗೀತಮ್ಮ ಬನ್ನೇರುಘಟ್ಟದ ಜನತಾ ಕಾಲೊನಿಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಒಂದು ಮನೆಯಲ್ಲಿ ತಾವು ವಾಸವಿದ್ದ ಗೀತಮ್ಮ, ಉಳಿದ ಎರಡು ಮನೆಗಳನ್ನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಯುವಕರಿಗೆ ಬಾಡಿಗೆ ನೀಡಿದ್ದರು.

ಗುರುವಾರ ಬೆಳಗ್ಗೆ ಮನೆಯ ಸುತ್ತಮುತ್ತ ಕೆಟ್ಟ ವಾಸನೆ ಹರಡಿತ್ತು. ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪರಿಶೀಲಿಸಿದಾಗ ಕೈ ಕಾಲು ರುಂಡವಿಲ್ಲದ ದೇಹ ಮಾತ್ರ ಪತ್ತೆಯಾಗಿದೆ.

ಮನೆಯಲ್ಲಿ ಬಾಡಿಗೆಗೆ ಇದ್ದ ಬಿಹಾರ ಮೂಲದ ಯುವಕರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಅವರ ಫೋನ್‌ ಸ್ವೀಚ್‌ಆಫ್‌ ಆಗಿರುವುದು ಅನುಮಾನ ಮೂಡಿಸಿದೆ. ಎರಡು, ಮೂರು ದಿನಗಳ ಹಿಂದೆ ಈ ಕೃತ್ಯ ನಡೆದಿರುವ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ಘಟನಾ ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದರು. ‘ಹತ್ಯೆಯ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಹಣ, ಆಭರಣಕ್ಕಾಗಿ ಹತ್ಯೆ ನಡೆದಿದೆಯೇ ಅಥವಾ ಅನ್ಯ ಕಾರಣಗಳಿಗಾಗಿ ಹತ್ಯೆ ನಡೆದಿದೆಯೇ ಎಂಬುದು ತನಿಖೆ ನಂತರ ತಿಳಿಯಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT