ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಲಾಲ್‌ ಹತ್ಯೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಬಿಜೆಪಿ ಒತ್ತಾಯ
Last Updated 1 ಜುಲೈ 2022, 2:34 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್‌ ಕನ್ಹಯ್ಯ ಲಾಲ್‌ ಅವರ ಬರ್ಬರ ಹತ್ಯೆಯು ಶಾಂತಿಪ್ರಿಯ ರಾಷ್ಟ್ರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಿಜಿಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಒತ್ತಾಯಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಶಾಂತಿಯುತ ರಾಷ್ಟ್ರ. ಹೆಚ್ಚುತ್ತಿರುವ ಅನ್ಯಕೋಮಿನ ದ್ವೇಷ ಭಾವನೆಯೇ ಈ ಹತ್ಯೆಗೆ ಮೂಲ ಕಾರಣ’ ಎಂದು ದೂರಿದರು.

ನೂಪುರ್‌ ಶರ್ಮ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಮೃತ ಕನ್ಹಯ್ಯ ಲಾಲ್‌ ಅವರನ್ನು ಪೊಲೀಸ್‌ ಠಾಣೆಗೆ ವಿಚಾರಣೆಗಾಗಿ ಕರೆಯಿಸಲಾಗಿತ್ತು. ಆ ವೇಳೆ ಅಧಿಕಾರಿಗಳ ಬಳಿ ಜೀವ ಬೆದರಿಕೆ ಕುರಿತು ಮಾಹಿತಿ ನೀಡಿದ್ದರು. ಆದರೂ ಅವರಿಗೆ ಪೊಲೀಸರು ರಕ್ಷಣೆ ನೀಡಿಲ್ಲ ಎಂದು ದೂರಿದರು.

ಈ ಹತ್ಯೆಯು ರಾಜಸ್ಥಾನದ ಕಾಂಗ್ರೆಸ್‌ ಆಡಳಿತರೂಢ ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಮಾತ್ರ ಬೆಂಬಲಿಸುವ ಧೋರಣೆ ಹೊಂದುವುದು ಉತ್ತಮ ಬೆಳವಣಿಗೆಯಲ್ಲ. ಬುದ್ಧಿಜೀವಿಗಳು ಕನ್ಹಯ್ಯ ಲಾಲ್‌ ಅವರ ಹತ್ಯೆ ಕುರಿತು ಮಾತನಾಡುತ್ತಿಲ್ಲವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಜಿ. ಚಂದ್ರಣ್ಣ ಮಾತನಾಡಿ, ‘ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಪ್ರಕರಣ ಕುರಿತು ಸೂಕ್ತ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಒಬದೇನಹಳ್ಳಿ ಮುನಿಯಪ್ಪ ಮಾತನಾಡಿ, ‘ಕೋಮು ಸೌಹಾರ್ದವನ್ನು ಹಾಳು ಮಾಡಿ, ಸಮಾಜದ ಶಾಂತಿ ನಾಶ ಮಾಡಲು ಹೊರಟಿರುವ ಘಾತುಕ ಶಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಕಾಂಗ್ರೆಸ್‌ ಆಡಳಿತದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ತಾಲ್ಲೂಕು ಅಧ್ಯಕ್ಷ ಸುಂದರೇಶ್‌, ಮುಖಂಡರಾದ ರಮೇಶ್‌, ರವಿ, ದೇಸು ನಾಗರಾಜ್‌, ಕನಕರಾಜು, ಮಂಜುನಾಥ್‌, ಧನಂಜಯ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT