ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಕ, ಮಾರ್ಗದರ್ಶಕ ನಾರಾಯಣ ರೆಡ್ಡಿ ಇನ್ನಿಲ್ಲ

Last Updated 14 ಜನವರಿ 2019, 19:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಾವಯವ ಕೃಷಿಕ, ರೈತರ ನೆಚ್ಚಿನಕೃಷಿ ಮಾರ್ಗದರ್ಶಕ ನಾಡೋಜ ಎಲ್‌.ನಾರಾಯಣರೆಡ್ಡಿ (84) ಸೋಮವಾರ ನಸುಕಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ವಗ್ರಾಮ ಮರಳೇನಹಳ್ಳಿಯಲ್ಲಿ ನಿಧನರಾದರು. ಬದುಕಿನುದ್ದಕ್ಕೂ ಸಾವಯವ ಕೃಷಿಯಲ್ಲಿ ತೊಡಗಿಕೊಂಡು, ನಿಸರ್ಗಕ್ಕೆ ಹತ್ತಿರವಾಗಿ ಬದುಕುವ ಪಾಠ ಹೇಳಿಕೊಟ್ಟ ನಾರಾಯಣ ರೆಡ್ಡಿ (84) ಇನ್ನು ನೆನಪು ಮಾತ್ರ.

ಅವರಿಗೆ ಪತ್ನಿ ಸರೋಜಮ್ಮ, ಮೂರು ಜನ ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಸಂಜೆ ಸ್ವಗ್ರಾಮ, ಬೆಂಗಳೂರು ಉತ್ತರ ತಾಲ್ಲೂಕಿನ ವರ್ತೂರು ಸಮೀಪದ ಸೊರಹುಣಸೆಯಲ್ಲಿ ನಡೆಯಿತು.

‘ಆರು ತಿಂಗಳಿನಿಂದ ಅವರಿಗೆ ಕಫ ಮತ್ತು ಕೆಮ್ಮು ಸಮಸ್ಯೆ ಕಾಣಿಸಿಕೊಂಡಿತ್ತು. ವಾರದಿಂದ ಈಚೆಗೆ ಸಮಸ್ಯೆ ಉಲ್ಬಣಿಸಿತ್ತು. ಅವರು ಮನೆಮದ್ದು ಮೂಲಕವೇ ಇದನ್ನು ಗುಣಪಡಿಸುವ ಪ್ರಯತ್ನ ಮಾಡಿದ್ದರು. ಹತೋಟಿಗೆ ಬಾರದ ಕಾರಣ ಸೋಮವಾರ ಬೆಂಗಳೂರಿನ ತಜ್ಞ ವೈದ್ಯರಿಗೆ ತೋರಿಸಲು ನಿರ್ಧರಿಸಿದ್ದರು. ಆದರೆ ಭಾನುವಾರ ರಾತ್ರಿ ಮಲಗಿದ ಅವರು ಮೇಲೇಳಲೇ ಇಲ್ಲ’ ಎಂದುಕುಟುಂಬದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾವಯವ ಕೃಷಿಯನ್ನು ಪ್ರಚುರ ಪಡಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು ದೇಶ ವಿದೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಸಾವಯವ ಕೃಷಿ ಬಗ್ಗೆ ಸಭೆ ಸಮಾರಂಭಗಳಲ್ಲಿ ನಿರರ್ಗಳವಾಗಿ ಗಂಟೆಗಟ್ಟಲೆ ಮನಮುಟ್ಟುವಂತೆ ಮಾತನಾಡುತ್ತಿದ್ದರು. ಅವರ ಬದುಕಿನ ಸಹಜ ಪಾಠಗಳಿಂದ ಆಕರ್ಷಿತರಾಗಿ ನೂರಾರು ಮಂದಿ ಜೀವನಶೈಲಿ ಬದಲಿಸಿಕೊಂಡಿದ್ದರು. ಅವರ ಸಾವಯವ ಕೃಷಿ ಕ್ಷೇತ್ರಕ್ಕೆ ನಿತ್ಯವೂ ಬೇರೆ ಬೇರೆ ಊರುಗಳಿಂದ ಜನ ಹಾಗೂ ವಿದ್ಯಾರ್ಥಿಗಳು ಬರುತ್ತಿದ್ದರು.

ಕೃಷಿ ಕ್ಷೇತ್ರದ ಸಾಧನೆಗಾಗಿ ಹಂಪಿ ಕನ್ನಡ ವಿವಿಯಿಂದನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದ ನಾರಾಯಣರೆಡ್ಡಿ ಅವರು ಸಾವಯವ ಮತ್ತು ಶೂನ್ಯ ಕೃಷಿ ಕುರಿತು ಪ್ರತಿಪಾದಿಸುತ್ತಿದ್ದ ವಿಚಾರಗಳಿಗೆ ಜಾಗತಿಕ ಮನ್ನಣೆ ಇತ್ತು.ಜಪಾನ್‌ನ ಮಸನವೊಫುಕುವೊಕ ಅವರೊಂದಿಗೂ ಒಡನಾಟ ಇತ್ತು. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ‘ಸಹಜ ಕೃಷಿ’ ಪುಸ್ತಕದಲ್ಲಿಯೂ ನಾರಾಯಣರೆಡ್ಡಿ ಅವರ ಪ್ರಸ್ತಾಪವಿದೆ.

‘ಪ್ರಜಾವಾಣಿ’ಯ ಕೃಷಿ ಪುರವಣಿಯಲ್ಲಿ ಹಲವು ವರ್ಷಗಳ ಕಾಲ ಕೃಷಿ ಸಂಬಂಧಿತ ಪ್ರಶ್ನೋತ್ತರ ಅಂಕಣದಲ್ಲಿರೈತರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಜರ್ಮನ್, ಇಂಗ್ಲಿಷ್ ಭಾಷೆಗಳನ್ನೂ ಕಲಿತಿದ್ದ ಅವರು, ವಿವಿಧ ದೇಶಗಳ ವಿಶ್ವವಿದ್ಯಾಲಯಗಳಲ್ಲಿಯೂ ಉಪನ್ಯಾಸಗಳನ್ನು ನೀಡುತ್ತಿದ್ದರು.

ಹೆಚ್ಚಿನ ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT