ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರೇಗಾದಿಂದ ಸಂಪೂರ್ಣ ಗ್ರಾಮದ ಅಭಿವೃದ್ಧಿ’

ಮಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ಮಂಜುನಾಥ್‌ ಹೇಳಿಕೆ
Last Updated 23 ಏಪ್ರಿಲ್ 2019, 13:57 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದನದ ಕೊಟ್ಟಿಗೆ ನಿರ್ಮಾಣದಿಂದ ಮೊದಲುಗೊಂಡು ಸ್ವಂತ ಮನೆ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಅಗತ್ಯ ಇರುವ ಯಾವುದೇ ಕೆಲಸವನ್ನು ಹಣದ ಮಿತಿಯೇ ಇಲ್ಲದೆ ನರೇಗಾ ಯೋಜನೆಯಲ್ಲಿ ಮಾಡಿಸಲು ಅವಕಾಶ ಇದೆ. ಆದರೆ ಕೆಲಸ ಮಾಡಿಸುವ ಮನಸ್ಸು, ಗ್ರಾಮದ ಜನರ ಸಹಕಾರ ಮುಖ್ಯ ಎಂದು ಮಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ಮಂಜುನಾಥ್‌ ಅವರ ಅಭಿಪ್ರಾಯ.

ತಾಲ್ಲೂಕಿನ ತೂಬಗೆರೆ ಹೋಬಳಿಯ ಮೇಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಹಳ್ಳಿ ಸುಮಾರು 80 ಕುಟುಂಬಗಳು ಇರುವ ಗ್ರಾಮ. ಮೂರು ವರ್ಷದಲ್ಲಿ ಈ ಗ್ರಾಮದಲ್ಲಿ ₹ 40 ಲಕ್ಷ ಗಳಷ್ಟು ವೆಚ್ಚದ ಕಾಮಗಾರಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ನಡೆದಿವೆ ಎಂದರು.

ಗ್ರಾಮದ ಎಲ್ಲ ರೈತರು ಒಂದೆಡೆ ರಾಗಿ ಕಣ ಮಾಡಿಕೊಳ್ಳಲು ಅನುಕೂಲವಾಗುವಂತೆ ₹ 4.80 ಲಕ್ಷ ವೆಚ್ಚದಲ್ಲಿ ಒಕ್ಕಣೆ ಮೈದಾನ, ಹೂಳು ತುಂಬಿಕೊಂಡು ತನ್ನ ಸ್ವರೂಪವನ್ನೇ ಕಳೆದುಕೊಂಡಿದ್ದ ನೀರಿನ ಕುಂಟೆಯನ್ನು ₹ 4.80 ಲಕ್ಷ ವೆಚ್ಚದಲ್ಲಿ ಪುನರ್‌ಜೀವನ, ಇಡೀ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಎಲ್ಲ ಭಾಗದಲ್ಲೂ ಚರಂಡಿಗಳ ನಿರ್ಮಾಣ ಹೀಗೆ ಕಾಮಗಾರಿಗಳ ಪಟ್ಟಿಯನ್ನು ಹೇಳುತ್ತ ಹೋದರೆ ದೊಡ್ಡದಾಗುತ್ತಲೇ ಹೋಗುತ್ತದೆ ಎಂದರು.

ಗ್ರಾಮದ ಸುತ್ತಲಿನ ಸಣ್ಣ ಪುಟ್ಟ ರಸ್ತೆಗಳನ್ನು ನರೇಗಾ ಯೋಜನೆಯಲ್ಲಿಯೇ ಕೆಲಸ ಮಾಡಿಸಲಾಗಿದೆ. ಮಾರಹಳ್ಳಿ ಗ್ರಾಮದಿಂದ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರ ಸಹಕಾರದಿಂದ ಚುನಾವಣೆ ಇಲ್ಲದೆಯೇ ಆಶಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದು ಮಂಜುನಾಥ್ ಹೇಳುತ್ತಾರೆ.

ಜನರ ವಿಶ್ವಾಸಕ್ಕೆ, ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಬೇಕು ಎನ್ನುವ ಉದ್ದೇಶದಿಂದ ಆಶಾ ಅವರ ಪತಿ ಮಂಜುನಾಥ್‌ ಗ್ರಾಮದ ಅಭಿವೃದ್ದಿಗೆ ನರೇಗಾ ಯೋಜನೆಯನ್ನು ಬಳಸಿಕೊಂಡಿದ್ದಾರೆ. ಹೀಗಾಗಿಯೇ ಗ್ರಾಮದಲ್ಲಿನ ಸಣ್ಣ ಪುಟ್ಟ ಗಲ್ಲಿ ರಸ್ತೆಗಳಿಗೂ ಯಾವುದೇ ಪಕ್ಷ, ಜಾತಿಯ ತಾರತಮ್ಯ ಇಲ್ಲದೆ ಕಾಂಕ್ರೀಟ್‌ ರಸ್ತೆಗಳನ್ನು ಮಾಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಾಲ್ಕು ಹಳ್ಳಿಯ ರಾಸುಗಳಿಗೆ ಅನುಕೂಲ:ಗಂಟಿಗಾನಹಳ್ಳಿ, ಭೂಮೇನಹಳ್ಳಿ, ಮೇಳೇಕೋಟೆ ಗ್ರಾಮದ ನೂರಾರು ರಾಸುಗಳು, ಕುರಿ, ಮೇಕೆಗಳನ್ನು ಮೇಯಿಸಲು ರೈತರು ಮಾರಹಳ್ಳಿ ಹೊರಭಾಗದ ದಿನ್ನೆ ಪ್ರದೇಶಕ್ಕೆ ಬರುತ್ತಿದ್ದರು. ರಾಸುಗಳು ನೀರು ಕುಡಿಯಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಶತಮಾನಗಳ ಹಿಂದೆ ಹಿರಿಯರು ಗೋ ಕಟ್ಟೆ (ಕುಂಟೆ) ನಿರ್ಮಿಸಿದ್ದರು. ಈ ಕುಂಟೆಯಲ್ಲಿ ವರ್ಷದ ಎಲ್ಲ ದಿನಗಳಲ್ಲು ನೀರು ನಿಂತಿರುತ್ತಿದ್ದವು. ಈ ಕುಂಟೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಹಗಲಿನ ವೇಳೆ ಕುರಿ, ಮೇಕೆಯಂತಹ ಸಾಕು ಪ್ರಾಣಿಗಳು ಈ ಕುಂಟೆಯಲ್ಲಿ ನೀರು ಕುಡಿಯಲು ಬಂದರೆ, ರಾತ್ರಿ ವೇಳೆ ಕಾಡು ಪ್ರಾಣಿ, ಪಕ್ಷಿಗಳು ಬರುತ್ತಿದ್ದವು. ಇಷ್ಟೊಂದು ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿನ ದಣಿವು ನಿವಾರಣೆ ಮಾಡುತ್ತಿದ್ದ ಕುಂಟೆ ಹೂಳಿನಿಂದ ತುಂಬಿಕೊಂಡಿದೆ. ಇಲ್ಲಿಗೆ ಮಳೆ ನೀರು ಹರಿದು ಬರುವ ಕಾಲುವೆಗಳು ಮುಚ್ಚಿ ಹೋಗಿದ್ದವು ಎನ್ನುತ್ತಾರೆ.

ಇವುಗಳನ್ನೆಲ್ಲ ತೆರವು ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಒಂದು ಮಳೆ ಬಿದ್ದರೂ ಸಾಕು ಕುಂಟೆ ತುಂಬಿಕೊಳ್ಳುವ ವಿಶ್ವಾಸ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT