ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಮಣ ಕಾಲಘಟ್ಟಕ್ಕೆ ನೇಕಾರಿಕೆ

Published 17 ಜುಲೈ 2023, 2:58 IST
Last Updated 17 ಜುಲೈ 2023, 2:58 IST
ಅಕ್ಷರ ಗಾತ್ರ

ನಟರಾಜ ನಾಗಸಂದ್ರ

ದೊಡ್ಡಬಳ್ಳಾಪುರ: ನಗರದ ಜೀವನಾಡಿ ಉದ್ಯಮವಾಗಿರುವ ನೇಕಾರಿಕೆಯನ್ನು ಅವಲಂಭಿಸಿದ್ದವರು ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯತ್ತ ಹೊಂದಿದ್ದ ಎಲ್ಲಾ ನಿರೀಕ್ಷೆಗಳು ಹುಸಿಯಾದ ನಂತರ ನೇಕಾರಿಕೆಯ ಮುಂದಿನ ಭವಿಷ್ಯ ಹೇಗೆ ಎನ್ನುವ ಚಿಂತೆ ಕಾಡಲಾರಂಭಿಸಿದೆ.

ಬಜೆಟ್‌ ಮಂಡನೆಗೂ ಮುನ್ನ ನಗರದ ನೇಕಾರರು ಜವಳಿ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿ ಬಂದಿದ್ದರು. ಹಾಗೆಯೇ ನಗರದಲ್ಲಿ ನೇಕಾರರ ಸಮಾವೇಶವನ್ನು ನಡೆಸುವ ಮೂಲಕ ಕೆಲ ನಿರ್ಣಯ ಕೈಗೊಂಡಿದ್ದರು. ಆದರೆ ಈ ಎಲ್ಲಾ ನಿರ್ಣಯಗಳು, ಬಜೆಟ್‌ ಘೋಷಣೆಗಳು ನೇಕಾರರಲ್ಲಿ ನಿರಾಸೆ ಮೂಡಿಸಿದ್ದು ನೇಕಾರಿಕೆ ಸಂಕ್ರಮಣ ಕಾಲಘಟ್ಟಕ್ಕೆ ಬಂದು ನಿಂತಿದೆ.

ಬಜೆಟ್‌ನಲ್ಲಿ 10 ಎಚ್‌ಪಿ ವಿದ್ಯುತ್‌ ಸಂಪರ್ಕ ಹೊಂದಿರುವ ನೇಕಾರರಿಗೆ 250 ಯುನೀಟ್‌ ವಿದ್ಯುತ್‌ ಉಚಿತ ಎಂದು ಹೇಳಗಾಗಿದೆ. ಆದರೆ ವಾಸ್ತದಲ್ಲಿ ಒಂದು ವಿದ್ಯುತ್‌ ಮಗ್ಗದಲ್ಲಿ ಸೀರೆ ನೇಯಲು ತಿಂಗಳಿಗೆ ಕನಿಷ್ಠ 100 ಯುನಿಟ್‌ ಬೇಕು. ಎರಡು ಮೂರು ಅಥವಾ ಅದಕ್ಕಿಂತಲು ಹೆಚ್ಚಿನ ಮಗ್ಗಗಳನ್ನು ಹೊಂದಿರುವ ನೇಕಾರರು ದುಬಾರಿ ವಿದ್ಯುತ್‌ ಬಿಲ್‌ ಪಾವತಿಸಬೇಕಿದೆ. ‌

ಏಪ್ರಿಲ್‌ ತಿಂಗಳಲ್ಲಿ ವಿದ್ಯುತ್‌ ದರ ಏರಿಕೆ ಮಾಡಿದಾಗ ಒಂದು ಯುನಿಟ್‌ಗ್ ₹1.25 ಪೈಸೆ ಯಿಂದ ₹2.25 ಪೈಸೆಗೆ ಏರಿಕೆ ಮಾಡಲಾಗಿದೆ. ಆದರೆ ಸೀರೆಗಳ ಬೆಲೆ ಮಾತ್ರ ಈ ಹಿಂದೆ ಇದ್ದಷ್ಟೇ ಇದೆ, ಕಚ್ಚಾವಸ್ತುಗಳ ಬೆಲೆಯು ಏರಿಕೆಯಾಗಿದೆ. ನೆರೆಯ ತೆಲಂಗಾಣ ರಾಜ್ಯದಲ್ಲಿ ನೇಕಾರಿಕೆಗೆ 750 ಯುನಿಟ್‌ ಉಚಿತವಾಗಿ ನೀಡಲಾಗುತ್ತಿದೆ ಎನ್ನುತ್ತಾರೆ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್‌.

ಹೆಚ್ಚಿದ ಸಂಘಟನೆ: ಒಗ್ಗಟ್ಟಿನ ಕೊರತೆ

ಸುಮಾರು 25 ಸಾವಿರ ವಿದ್ಯುತ್‌ ಮಗ್ಗಗಳು ಇರುವ ನಗರದಲ್ಲಿ ಒಂದೂವರೆ ದಶಕಗಳ ಹಿಂದೆ ನೇಕಾರರು ಒಂದೇ ಸಂಘಟನೆ ಅಡಿಯಲ್ಲಿ ಪಕ್ಷಾತೀತವಾಗಿ ಗಟ್ಟಿಯಾದ ಹೋರಾಟಗಳನ್ನು ನಡೆಸುತ್ತ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಹೋರಾಟದ ಫಲವಾಗಿಯೇ ಮಗ್ಗಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ದೊರೆಯುವಂತೆ ಆಗಿದ್ದು ಸೇರಿದಂತೆ ಹಲವಾರು ಸ್ಥಳೀಯ ಸಮಸ್ಯೆಗಳ ಪರಿಹಾರ, ಸರ್ಕಾರದ ಹೊಸ ಯೋಜನೆಗಳು ಜಾರಿಗೆ ಬಂದಿದ್ದವು. ಆದರೆ ಈಗ ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಸುಮಾರು 8 ಕ್ಕೂ ಹೆಚ್ಚಿನ ನೇಕಾರರ ಸಂಘಟನೆಗಳು ಇವೆ. ಆದರೆ ನೇಕಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸ್ಪಂದಿಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರೂ, ಅವು ಈಡೇರುತ್ತಿಲ್ಲ.

ಆಡಳಿತ ಪಕ್ಷದ ಪರವಾಗಿರುವ ಸಂಘಟನೆ ಸರ್ಕಾರದ ಪರವಾಗಿ ವಾದ ಮಂಡಿಸಿ ಮೃದು ದೋರಣೆ ತೋರಿದರೆ, ಸರ್ಕಾರದ ವಿರುದ್ಧವಾಗಿರುವ ಸಂಘಟನೆ ಹೋರಾಟಕ್ಕೆ ಕರೆ ನೀಡುತ್ತದೆ. ಹೀಗಾಗಿಯೇ ನೇಕಾರ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಬಜೆಟ್‌ನಲ್ಲಿ ನೇಕಾರರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಂತೆ ಆಗಿದೆ ಎನ್ನುತ್ತಾರೆ ನೇಕಾರರ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಮುಖಂಡರು.

ಬಜೆಟ್‌ಗೂ ಮುನ್ನ ನಗರದಲ್ಲಿ ನಡೆದ ನೇಕಾರರ ಸಮಾವೇಶದಲ್ಲಿ ಸೀರೆಗಳಿಗೆ ನಿಗದಿತ ಬೆಲೆ, ಸೀರೆಗಳ ಖರೀದಿಗೆ ಸಹಕಾರ ಸಂಘ ಸ್ಥಾಪನೆ, ಇಲ್ಲಿ ನೇಯುವ ಸೀರೆಗಳಿಗೆ ಪ್ರತ್ಯೇಕ ಬ್ರ್ಯಾಂಡ್‌ ರೂಪಿಸುವ ಬೇಡಿಕೆಗಳು ಈಡೇರುವವರೆಗೂ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಸೀರೆ ನೇಯಬೇಕು. ಇದು ಹೋರಾಟದ ಪ್ರಾಥಮಿಕ ಹಂದ ಒಂದು ವಿಧಾನ. ನಂತರ ಬೇರೆ ರೀತಿಯ ಹೋರಾಟವನ್ನು ರೂಪಿಸೋಣ ಎನ್ನುವ ನಿರ್ಣಯವನ್ನು ಸಮಾವೇಶದಲ್ಲಿ ತೆಗೆದುಕೋಳ್ಳಲಾಗಿತ್ತು. ಆದರೆ ಸಂಘಟನೆಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ನಿಯಮಗಳು ಜಾರಿಗೆ ಬರಲೇ ಇಲ್ಲ.

ಸೀರೆ ಮಾರಾಟಕ್ಕೆ ಇಲ್ಲದ ವೇದಿಕೆ

ದೇವಾಂಗ ಸಮುದಾಯ ಮಾತ್ರವಲ್ಲದೆ ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ಸಮುದಾಯವದರು ಸಹ ಮಾಲೀಕರಿಂದ ಕಾರ್ಮಿಕರವರೆಗೂ ನೇಕಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತದ ಕಾರ್ಮಿಕರ ಸಂಖ್ಯೆ ನೇಕಾರಿಕೆಯಲ್ಲಿ ಹೆಚ್ಚಾಗುತ್ತಿದೆ. ಆಧುನಿಕ ವಿದ್ಯುತ್‌ ಮಗ್ಗಗಳು, ವಿನ್ಯಾಸಗಳು ಸಹ ಬಂದಿದ್ದು ಸೀರೆಗಳ ನೇಯುವ ಸಂಖ್ಯೆಯಲ್ಲೂ ಹೆಚ್ಚಾಗಿದೆ.

ದಶಕಗಳಿಂದಲು ಇಲ್ಲಿ ಸೀರೆಗಳನ್ನು ನೇಯುತ್ತಿದ್ದವರು ಮಾರಾಟಕ್ಕೆ ಸೂಕ್ತ ವೇದಿಕೆ, ಬ್ರ್ಯಾಂಡ್‌ ರೂಪಿಸಿಕೊಳ್ಳುವ ಕಡೆಗೆ ಚಿಂತನೆ ನಡೆಸದೇ ಹೋಗಿದ್ದೇ ಇಂದು ನೇಕಾರಿಕೆ ಉದ್ಯಮ ಸಂಕಷ್ಟದ ದಿನಗಳನ್ನು ಎದುರಿಸುತ್ತ ಎಲ್ಲಕ್ಕೂ ಸರ್ಕಾರವನ್ನು ಅವಲಂಭಿಸುವಂತ ಸ್ಥಿತಿಗೆ ಬಂದು ತಲುಪಿದ್ದು ಮಾಲೀಕರಾಗಿ ನೇಕಾರಿಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತಲು ಬಾಶೇಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವುದೇ ಒಳಿತು ಎನ್ನುವಂತಾಗಿದೆ ಎನ್ನುತ್ತಾರೆ ಕರೇನಹಳ್ಳಿಯ ನೇಕಾರ ಶಿವಶಂಕರ್‌.

ಇಲ್ಲಿನ ಸೀರೆಗಳನ್ನೇ ತೆಗೆದುಕೊಂಡು ಹೋಗುವ ವಿವಿಧ ಬ್ರ್ಯಾಂಡ್‌ ಕಂನಿಗಳು ಅವರದೇ ಆದತಂಹ ಬ್ರ್ಯಾಂಡ್‌ ಹೆಸರುಗಳ ಲೇಬಲ್‌ ಅಂಟಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ಹಗಲೆನ್ನದೆ ಸೀರೆಗಳನ್ನು ನೇಯುವ ನೇಕಾರರು ಮಾತ್ರ ವಿದ್ಯುತ್‌ ಬಿಲ್‌ ಕಟ್ಟಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಬದಿಗೊತ್ತಿ ನೇಕಾರಿಕೆಯ ಉಳಿವಿಗಾಗಿ ಹಾಗೂ ಇಲ್ಲಿನ ಸೀರೆಗಳ ಮಾರಾಟಕ್ಕೆ ಒಂದು ಬ್ರ್ಯಾಂಡ್‌ ರೂಪಿಸಿಕೊಳ್ಳುವ ತುರ್ತು ಅಗತ್ಯವಿದೆ. ಇಲ್ಲವಾದರೆ ನೇಕಾರಿಕೆ ಸ್ಥಳೀಯರ ಕೈ ತಪ್ಪುವ ಅಪಾಯಗಳಿವೆ ಎನ್ನುವುದು ಸ್ಥಳೀಯ ನೇಕಾರರ ಆತಂಕವಾಗಿದೆ.

ದೊಡ್ಡಬಳ್ಳಾಪುರದ ವಿದ್ಯುತ್‌ ಮಗ್ಗಗಳಲ್ಲಿ ನೇಯಲಾಗಿರುವ ವಿವಿಧ ವಿನ್ಯಾಸದ ಸೀರೆಗಳು
ದೊಡ್ಡಬಳ್ಳಾಪುರದ ವಿದ್ಯುತ್‌ ಮಗ್ಗಗಳಲ್ಲಿ ನೇಯಲಾಗಿರುವ ವಿವಿಧ ವಿನ್ಯಾಸದ ಸೀರೆಗಳು
ದೊಡ್ಡಬಳ್ಳಾಪುರದ ವಿದ್ಯುತ್‌ ಮಗ್ಗಗಳಲ್ಲಿ ನೇಯಲಾಗಿರುವ ಸೀರೆಯನ್ನು ಹುಟ್ಟಿರುವ ಮಾಡೇಲ್‌
ದೊಡ್ಡಬಳ್ಳಾಪುರದ ವಿದ್ಯುತ್‌ ಮಗ್ಗಗಳಲ್ಲಿ ನೇಯಲಾಗಿರುವ ಸೀರೆಯನ್ನು ಹುಟ್ಟಿರುವ ಮಾಡೇಲ್‌
ದೊಡ್ಡಬಳ್ಳಾಪುರದ ವಿದ್ಯುತ್‌ ಮಗ್ಗಗಳಲ್ಲಿ ನೇಯಲಾಗಿರುವ ಸೀರೆಗಳಿಗೆ ಪಾಲೀಷ್‌ ಮಾಡುತ್ತಿರುವುದು
ದೊಡ್ಡಬಳ್ಳಾಪುರದ ವಿದ್ಯುತ್‌ ಮಗ್ಗಗಳಲ್ಲಿ ನೇಯಲಾಗಿರುವ ಸೀರೆಗಳಿಗೆ ಪಾಲೀಷ್‌ ಮಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT