ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಮಾರಾಟ ಮಾಡಲ್ಲ ಹೋರಾಟಕ್ಕೆ ಸಜ್ಜು: ವಕೀಲ ಸಿದ್ದಾರ್ಥ್‌

Last Updated 14 ಫೆಬ್ರುವರಿ 2022, 5:37 IST
ಅಕ್ಷರ ಗಾತ್ರ

ದೇವನಹಳ್ಳಿ: ‘ವಿಮಾನ ನಿಲ್ದಾಣದ 50 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಭೂ ಸ್ವಾಧೀನ ಪ್ರಕ್ರಿಯೆ ಮಾಡಬಾರದು. ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ, ಭೂಮಿ ಮಾರಾಟ ಮಾಡಲು ತಿರಸ್ಕರಿಸಿದ್ದಾರೆ’ ಎಂದು ರೈತ ಮುಖಂಡ ಹಿರಿಯ ವಕೀಲ ಸಿದ್ದಾರ್ಥ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜೀವ, ಜಲ, ಜಗತ್ತು ಇದು ಯಾರ ಸ್ವತ್ತು ಅಲ್ಲ, ಇದನ್ನು ಆಧಾರಿಸಿ ಎಲ್ಲರು ಬದುಕುತ್ತಿದ್ದೇವೆ. ಭ್ರಷ್ಟಾಚಾರ ಮುಗಿಲು ಮುಟ್ಟಿರುವ ಸಂದರ್ಭದಲ್ಲಿ ಸರ್ಕಾರ ಇಂತಹ ಕೀಳು ಪ್ರಕ್ರಿಯೆ ಮಾಡುತ್ತಿವೆ’ ಎಂದು ಆರೋಪಿಸಿದರು.

‘ಭೂ ಸ್ವಾಧೀನ ಎಂಬ ಪೀಡೆಯಿಂದ ಈಗಾಗಲೇ ತಾಲ್ಲೂಕಿನಲ್ಲಿ ರೈತರ ಮೂರು ತಲೆಮಾರುಗಳು ಸತ್ತು ಹೋಗಿದೆ. ಮದ್ಯದ ಅಮಲಿಗೆ ರೈತರು ಸಿಲುಕಿ ಅನ್ನದಾತ ಕುಡುಕನಾಗುತ್ತಿದ್ದಾನೆ. ರೈತರು ಎಚ್ಚೆತ್ತುಕೊಂಡಿದ್ದು ಉಗ್ರ ಹೋರಾಟ ಮಾಡಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ‘ಕೃಷಿಗೆ ಯೋಗ್ಯವಾಗಿರುವ 2,300 ಎಕರೆ, ನೀರಾವರಿ ಜಮೀನು, ದ್ರಾಕ್ಷಿ, ಪಾಲಿ ಹೌಸ್‌, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಭೂಮಿಯನ್ನು ಸರ್ಕಾರ ಭೂ ಸ್ವಾಧೀನ ಮಾಡುತ್ತಿರುವ ವಿರುದ್ಧವಾಗಿ ಚನ್ನರಾಯಪಟ್ಟಣದ ನಾಡಕಚೇರಿಯಿಂದ ಬೀರಸಂದ್ರದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಟ್ರ್ಯಾಕ್ಟರ್‌ ರಾಲಿ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ರೈತರು ಕೈಗಾರಿಕೆಗಳ ವಿರೋಧಿಗಳಲ್ಲ, ಈಗಾಗಲೇ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಕೈಗಾರಿಕೆ ಉದ್ದೇಶವಾಗಿ ಭೂಸ್ವಾಧೀನಗೊಂಡಿದೆ. ಇದನ್ನು ಮತ್ತಷ್ಟು ವಿಸ್ತರಣೆ ಮಾಡುವ ಅಗತ್ಯವಿಲ್ಲ. ರೈತರಿಗೆ ಭೂಮಿ ಇದ್ದಲ್ಲಿ ದೇಶಕ್ಕೆ ಅನ್ನ ನೀಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿ ಕುಮಾರ್‌ ಮಾತನಾಡಿ, ‘ತಾಲ್ಲೂಕಿನಲ್ಲಿ ನಿರಂತರವಾಗಿ ರೈತರ ಭೂಮಿ ಸ್ವಾಧೀನ ನಡೆಸುತ್ತಿದ್ದಾರೆ. ಇದರನ್ನು ಅರಿತು ಹೊರ ಜಿಲ್ಲೆಯಲ್ಲಿ ಕೃಷಿ ಜಮೀನು ಪಡೆದುಕೊಳ್ಳುವ ಪ್ರಮೇಯವನ್ನು ಸರ್ಕಾರ ಸೃಷ್ಟಿಸಿದೆ. ಸರ್ಕಾರ ನೀಡುವ ಪರಿಹಾರ ಹಣದಿಂದ ಮನೆ ಮದುವೆ ಮಾಡಿ ಖರ್ಚು ಮಾಡುತ್ತೇವೆ. ರೈತರ ಸಂಸಾರವನ್ನೇ ಹಾಳು ಮಾಡುವ ಒಂದು ಅನಿಷ್ಟ ಪದ್ಧತಿ ಭೂಸ್ವಾಧೀನ’ ಎಂದು ವ್ಯಂಗ್ಯವಾಡಿದರು.

ರೈತ ಮುಖಂಡ ವೆಂಕಟನಾರಾಯಣ್ನಪ್ಪ ಪ್ರೊ.ನಂಜುಂಡಸ್ವಾಮಿ ಅವರ ಕುರಿತು ಮಾಹಿತಿ ನೀಡಿ ಸ್ಮರಿಸಿದರು, ವಿವಿಧ ರೈತ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT