ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಹತ್ಯೆ ತಡೆಗೆ ಸೂಚನೆ: ಅಕ್ರಮ ಸಾಗಾಣೆ ಮೇಲೆ ಹದ್ದಿನಕಣ್ಣು

ಒಂಟೆ ಸಾಗಾಣಿಕೆ ನಿಷೇಧ; 22 ಚೆಕ್‌ಪೋಸ್ಟ್‌ ಸ್ಥಾಪನೆ
Last Updated 15 ಜುಲೈ 2021, 4:03 IST
ಅಕ್ಷರ ಗಾತ್ರ

ದೇವನಹಳ್ಳಿ:ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ನಿಯಮ 1964, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ 2020ರ ಪ್ರಕಾರ ಜಾನುವಾರು ಹತ್ಯೆ ನಿಷೇಧಿಸಲಾಗಿದೆ ‌ಎಂದು‌ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಜಾನುವಾರು ಹತ್ಯೆ ಮತ್ತು ಸಾಗಾಣಿಕೆ ನಿರ್ಬಂಧಿಸಲು ರಚಿಸಲಾಗಿರುವ ಜಿಲ್ಲಾ‌ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಯಾವೊಬ್ಬ ವ್ಯಕ್ತಿಯೂ ಜಾನುವಾರು ಹತ್ಯೆ ನಡೆಸುವಂತಿಲ್ಲ. ಜಾನುವಾರು ಹತ್ಯೆಗಾಗಿ ಅವುಗಳ ಮಾರಾಟ, ಖರೀದಿ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960ರ‌ ರೀತ್ಯಾ ಒಂಟೆ ಮಾಂಸವನ್ನು ಮಾನವನ ಬಳಕೆಗೆ ನಿರ್ದಿಷ್ಟಪಡಿಸಲ್ಲದ ಕಾರಣ ಜಿಲ್ಲೆಯಾದ್ಯಂತ ಒಂಟೆಗಳ ಹತ್ಯೆ, ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘನೆ ಮಾಡಿದರೆ ಸೆರೆವಾಸ ಮತ್ತು ಜುಲ್ಮಾನೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾನೂನುಬಾಹಿರವಾಗಿ ಜಾನುವಾರು ಹತ್ಯೆ ಮಾಡಬಾರದು. ಈ ಬಗ್ಗೆ ನಿಗಾವಹಿಸಲು ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ, ಸಾರಿಗೆ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ಹೋಬಳಿಮಟ್ಟದಲ್ಲಿ ರಚಿಸಲಾಗಿದೆ ಎಂದು ತಿಳಿಸಿದರು.

ಹೊರರಾಜ್ಯ, ಹೊರಜಿಲ್ಲೆಗಳಿಂದ ಬರುವ ಜಾನುವಾರು ಸಾಗಾಣಿಕೆ ತಡೆಗಟ್ಟಲು ಈಗಾಗಲೇ ಜಿಲ್ಲೆಯಾದ್ಯಂತ 22 ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಗಾವಹಿಸಬೇಕಿದೆ. ಅಕ್ರಮ ಸಾಗಾಣಿಕೆ ಕಂಡುಬಂದಲ್ಲಿ ಅಂತಹ ವಾಹನಗಳನ್ನು ವಶಪಡಿಸಿಕೊಂಡು ಜಾನುವಾರುಗಳನ್ನು ಗೋಶಾಲೆಗಳಿಗೆ ನೀಡಬೇಕು ಎಂದು ಸೂಚಿಸಿದರು.

ಬಕ್ರೀದ್ ಹಬ್ಬದ ‌ಸಮಯದಲ್ಲಿ ಉತ್ಪತ್ತಿಯಾಗುವ ಅಪಾರ ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕವಾಗಿ‌ ವಿಲೇವಾರಿ ‌ಮಾಡುವಂತೆ ನಗರಸಭೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕ್ರಮವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಡಾ.ಕೊ.ನಾ. ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್ ನಾಯಕ್, ಪಶುಪಾಲನಾ ಇಲಾಖೆಯ ಉಪ ನಿರ್ದೆಶಕ ಡಾ.ಜಿ.ಎಂ. ನಾಗರಾಜ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಎಂ. ಮುನಿಕೃಷ್ಣಪ್ಪ, ತಾಲ್ಲೂಕು ಮಟ್ಟದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ಪೌರಾಯುಕ್ತರು, ಪುರಸಭಾ ಮುಖ್ಯಾಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT