ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರ ಸಮಾವೇಶಕ್ಕೆ ವಿರೋಧ

ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶ
Last Updated 1 ನವೆಂಬರ್ 2022, 6:03 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ. 2ರಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಲ್ಕು ವರ್ಷಗಳಲ್ಲಿ ಬಂದೆರೆಗಿದ ಅತಿವೃಷ್ಟಿ, ಬರಗಾಲ ಹಾಗೂ ಕೋವಿಡ್ ಲಾಕ್‌ಡೌನ್ ಮುಂತಾದ ಪ್ರಾಕೃತಿಕ ವಿಕೋಪದಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಜೊತೆಗೆ, ಎಂದಿನಂತೆ ಸರ್ಕಾರದ ರೈತ ವಿರೋಧಿ ಧೋರಣೆಗಳಿಂದ ನೊಂದಿದ್ದ ರೈತ ಸಮುದಾಯ ಈ ವರ್ಷವಾದರೂ ತಮ್ಮ ಛಿದ್ರಗೊಂಡ ಬದುಕನ್ನು ಸರಿಪಡಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ, ಸರ್ಕಾರ ಭೂಸ್ವಾಧಿನದ ಮೂಲಕ ಅದನ್ನು ಕಸಿದುಕೊಳ್ಳುತ್ತಿದೆ ಎಂದು ದೂರಿದರು.

ರೈತಾಪಿ ಸಮುದಾಯದ ಬಂಡವಾಳ ರಕ್ಷಣೆಗೆ ಯಾವುದೇ ಮಾತನ್ನಾಡದ ರಾಜ್ಯ ಬಿಜೆಪಿ ಸರ್ಕಾರ ರೈತರ ಭೂಮಿ, ವಿದ್ಯುತ್, ನೀರು ಇತ್ಯಾದಿ ಅಮೂಲ್ಯ ಆಸ್ತಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುತ್ತಿದೆ ಎಂದು ಹೇಳಿದರು.

ನ. 2ರಿಂದ ಮೂರು ದಿನಗಳ ಕಾಲ ಬೆಂಗಳೂರು ಹೊರವಲಯದಲ್ಲಿ ಸಮಾವೇಶ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದೊಂದು ರೈತ ಹಾಗೂ ಜನ ವಿರೋಧಿ ಕ್ರಮವಾಗಿದೆ ಎಂದು ಟೀಕಿಸಿದರು.

ಲ್ಯಾಂಡ್ ಬ್ಯಾಂಕ್, ಕೆಐಎಡಿಬಿ ಮೊದಲಾದ ಹೆಸರಿನಲ್ಲಿ ಭೂಸ್ವಾಧೀನದ ಮೂಲಕ ರಾಜ್ಯದಾದ್ಯಂತ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ. ಇತ್ತ ಕೃಷಿಯೂ ಇಲ್ಲದೇ ಅತ್ತ ಕೈಗಾರಿಕೆಯೂ ಇಲ್ಲದೇ ಪಾಳು ಬಿದ್ದಿರುವ ಈ ಭೂಮಿಗಳಲ್ಲಿ ಯಾವುದೇ ಪರಿಣಾಮಕಾರಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು
ಹೇಳಿದರು.

ಕಾರ್ಪೋರೇಟ್ ಕಂಪನಿಗಳ ಭೂ ದಾಹಕ್ಕೆ ಮತ್ತು ಆಸ್ತಿ ಮೌಲ್ಯದ ಹೆಚ್ಚಳಕ್ಕೆ ಕೃಷಿ ಭೂಮಿ ಬಳಕೆಯಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಂಘಟಿಸುತ್ತಿರುವುದು ನಿರರ್ಥಕ. ಕಷ್ಟ, ನಷ್ಟದಲ್ಲಿರುವ ರೈತ ಸಮುದಾಯದ ಭೂಮಿ, ವಿದ್ಯುತ್, ನೀರು ಮುಂತಾದ ಆಸ್ತಿ, ಸಂಪತ್ತನ್ನು ದರೋಡೆ ಮಾಡುವುದು ಸರಿಯಲ್ಲ ಎಂದರು.

ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರದ್ದುಪಡಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ-2022 ಅನ್ನು ಸಂಸತ್ತಿನಿಂದ ವಾಪಸ್‌ ಪಡೆಯಲು ರಾಜ್ಯ ಸರ್ಕಾರ ಆಗ್ರಹಿಸಬೇಕು. ಅತಿವೃಷ್ಟಿಗೆ ಮನೆ-ಬೆಳೆ ಕಳೆದುಕೊಂಡ ರೈತ-ಕೂಲಿಕಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಗ್ರಾಮೀಣರ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟಿಎಪಿಸಿಎಂಎಸ್‌ ನಿರ್ದೇಶಕ ಆನಂದ್‌, ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ಆರ್‌. ನಾಗರಾಜ್‌, ಸಿ.ಎಚ್‌. ರಾಮಕೃಷ್ಣ, ಚನ್ನಕೇಶವ, ಮೂರ್ತಿ, ಶಂಕರ್‌, ವಿಜಯ್‌ ಕುಮಾರ್‌, ಸದಾಶಿವಯ್ಯ, ಶಿವಕುಮಾರ್‌, ವಿವೇಕ್‌ಕುಮಾರ್‌
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT