ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಬಿಡುವ ಮೊದಲೇ ಪರಿಹಾರ ನೀಡಿ

ಬೂದಿಗೆರೆಯ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸಭೆಯಲ್ಲಿ ಒತ್ತಾಯ
Last Updated 27 ಆಗಸ್ಟ್ 2019, 14:55 IST
ಅಕ್ಷರ ಗಾತ್ರ

ವಿಜಯಪುರ: ‘4 ಪಥಗಳ ರಸ್ತೆ ನಿರ್ಮಾಣದ ವೇಳೆ ತಮಗಿರುವ ತುಂಡು ಭೂಮಿ ಕಳೆದುಕೊಳ್ಳುವ ಜನರಿಗೆ ಸೂಕ್ತ ಪರಿಹಾರ ನೀಡಿ, ಅವರ ತಮ್ಮ ಭವಿಷ್ಯ ರೂಪಿಸಿಕೊಳ್ಳಲಿಕ್ಕೆ ಮುಂದಾಗಬೇಕು’ ಎಂದು ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಶ್ರೀನಿವಾಸಗೌಡ ಒತ್ತಾಯಿಸಿದರು.

ಸಮೀಪದ ಬೂದಿಗೆರೆ ಗ್ರಾಮದ ಸಾಯಿಬಾಬಾ ಜ್ಞಾನ ಮಂದಿರದಲ್ಲಿ ಸೋಮವಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ರಸ್ತೆ ನಿರ್ಮಾಣಕ್ಕೆ ಪ್ರಸ್ತಾಪಿತ ಭೂ ಮಾಲೀಕರು ಹಾಗೂ ಅನುಭವದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಭಾಗದಲ್ಲಿನ ಸಾಕಷ್ಟು ರೈತರು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿಗಳನ್ನು ಕೊಟ್ಟಿದ್ದಾರೆ. ಇರುವ ತುಂಡು ಭೂಮಿಗಳಲ್ಲಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಸಂಚರಿಸಲು ವಿಶಾಲವಾದ ರಸ್ತೆಯಾಗಬೇಕಾಗಿರುವ ಕಾರಣ ಸರ್ಕಾರ, ತುಂಡು ಭೂಮಿಗಳನ್ನು ಹೊಂದಿರುವ ಸಾಕಷ್ಟು ರೈತರನ್ನು ಗುರುತಿಸಿ ಪ್ರಸ್ತಾವನೆ ಸಿದ್ದಪಡಿಸಿದೆ. ಇಂತಹ ರೈತರಿಗೆ ಸೂಕ್ತ ಪರಿಹಾರ ನೀಡಿದ ನಂತರವೇ ಭೂಮಿಯನ್ನು ನಿಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಅನಿವಾರ್ಯ: ರೈತ ಮುಖಂಡ ಎನ್. ಪದ್ಮನಾಭ್ ಮಾತನಾಡಿ, ‘ರೈತರು ತಮಗಿರುವ ತುಂಡು ಭೂಮಿಗಳಲ್ಲಿ ಬೆಳೆ ಬೆಳೆದುಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಈಗ ಈ ಭೂಮಿ ರಸ್ತೆ ನಿರ್ಮಾಣಕ್ಕೆ ಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಮೊದಲು ರೈತರ ಭೂಮಿಗೆ ಸೂಕ್ತವಾದ ಬೆಲೆ ನಿಗದಿಪಡಿಸಬೇಕು. ಒಂದು ವೇಳೆ ಸೂಕ್ತ ಪರಿಹಾರ ನೀಡದೆ ಭೂ ಸ್ವಾಧೀನಕ್ಕೆ ಮುಂದಾದರೆ ನಾವು ಹೋರಾಟಕ್ಕಿಳಿಯಬೇಕಾಗಿರುವುದು ಅನಿವಾರ್ಯವಾಗಲಿದೆ’ ಎಂದರು.

ನಿಗಮದ ಕಾರ್ಯಪಾಲಕ ಎಂಜಿನಿಯರ್ ರಮ್ಯಾ ಮಾತನಾಡಿ, ‘ಬೂದಿಗೆರೆಯಿಂದ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಕಾರಣ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಆದ ಕಾರಣ ಇದನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿರುವ ಕಾರಣ ನಿಮ್ಮ ಅಭಿಪ್ರಾಯಗಳು, ಸಮಸ್ಯೆಗಳನ್ನು ತಿಳಿಸಿದರೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ’ ಎಂದರು.

ಗ್ರಾಮಸ್ಥೆ ಗೌರಮ್ಮ ಮಾತನಾಡಿ, ‘ನಮಗೆ ಸರ್ಕಾರದಿಂದ ಕೊಟ್ಟಿರುವ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಜೀವನ ಮಾಡುತ್ತಿದ್ದೇನೆ. ಮನೆ ಇರುವ ಜಾಗವನ್ನು ರಸ್ತೆಗೆ ತೆಗೆದುಕೊಂಡರೆ ಪುನಃ ಮನೆ ನಿರ್ಮಾಣ ಮಾಡಿಕೊಳ್ಳಲಿಕ್ಕೆ ಶಕ್ತಿಯಿಲ್ಲ ಆದ್ದರಿಂದ ನಮ್ಮ ಮನೆಯನ್ನು ಕೆಡವಬೇಡಿ’ ಎಂದರು.

ಭೂ ಸ್ವಾಧೀನ ತಹಶೀಲ್ದಾರ್ ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾರತಿ ಲಕ್ಷ್ಮಣ್‌ಗೌಡ, ಕೆ.ಆರ್.ಡಿ.ಸಿ.ಎಲ್ ವಿಶೇಷ ಭೂಸ್ವಾಧೀನಾಧಿಕಾರಿ ಟಿ.ಆರ್. ಶೋಭ, ಎಇಇ ರವಿಕುಮಾರ್, ಶಾರದಮ್ಮ ಸೀನಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮುರಳಿ, ಶಿಕ್ಷಕ ವೆಂಕಟಪತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಗೋಪಾಲರೆಡ್ಡಿ, ಕಾರ್ಯದರ್ಶಿ ಲಕ್ಷ್ಮೀಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT