ಮಂಗಳವಾರ, ಮೇ 24, 2022
26 °C

ಮಾದರಿ ಪುರಸಭೆಗೆ ಕ್ರಿಯಾಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಆನೇಕಲ್‌ ಪುರಸಭೆಯನ್ನು ಮಾದರಿ ಪುರಭೆಯನ್ನಾಗಿ ಮಾಡುವ ಕನಸಿದೆ. ಕನಸು ಸಾಕಾರಗೊಳಿಸಲು ಸಾರ್ವಜನಿಕರು ಕಂದಾಯ ಪಾವತಿ ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಮೂಲಕ ಸಹಕರಿಸಬೇಕು ಎಂದು ಪುರಸಭಾ ಅಧ್ಯಕ್ಷ ಎನ್‌.ಎಸ್‌. ಪದ್ಮನಾಭ್‌ ತಿಳಿಸಿದರು.

ಅವರು ಪಟ್ಟಣದ ಪುರಸಭೆ ಕಚೇರಿಯಲ್ಲಿ ಪುರಸಭೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಪಟ್ಟಣದ ಬಹುದಿನ ಬೇಡಿಕೆಯಾಗಿರುವ ಥಳೀ ರಸ್ತೆ ವಿಸ್ತರಣೆ ಮಾಡುವ ಮೂಲಕ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಶಾಸಕರು ಮತ್ತು ಸಂಸದರ ಆಶಯವಾಗಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು ರಸ್ತೆ ವಿಸ್ತರಣೆ ಕಾರ್ಯವನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದರು.

ಕಾವೇರಿ ನೀರು ಪೂರೈಕೆಯಾಗಿದ್ದರೂ ಸಮರ್ಪಕ ವಿತರಣೆಯಾಗುತ್ತಿಲ್ಲ. ಹಾಗಾಗಿ ಸುಮಾರು ₹ 1.80 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ. ಆನೇಕಲ್‌ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ವಿವಿಧ ವಾರ್ಡ್‌ಗಳಲ್ಲಿ ಕೊಳವೆ ಬಾವಿ ಕೊರೆಯಿಸಲಾಗಿದೆ ಮತ್ತು ಹಳೆಯ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರಿಂದ ನೀರಿನ ಪೂರೈಕೆಯ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.

ಸುಮಾರು 40 ವರ್ಷಗಳಷ್ಟು ಹಳೆಯದಾದ ಓವರ್‌ಹೆಡ್ ಟ್ಯಾಂಕ್‌ ಶಿಥಿಲಗೊಂಡಿದೆ. ನೀರು ಪೂರೈಕೆಗೆ ಅನುಕೂಲವಾಗುವಂತೆ 5 ಲಕ್ಷ ಲೀ. ಸಂಗ್ರಹ ಶಕ್ತಿಯುಳ್ಳ ಓವರ್‌ಹೆಡ್‌ ಟ್ಯಾಂಕ್ ನಿರ್ಮಿಸಲು ಎಎಸ್‌ಬಿ ಕಾಲೇಜು ಆಟದ ಮೈದಾನದಲ್ಲಿ ಸ್ಥಳ ಗುರುತಿಸಲಾಗಿದೆ. ಶ್ರೀರಾಮಮಂದಿರದಿಂದ ತಿಲಕ್‌ ಸರ್ಕಲ್‌ವರೆಗೂ ರಸ್ತೆಯ ಎರಡು ಕಡೆ ಸ್ಟೀಲ್‌ ಗ್ರಿಲ್‌ ಮರುಜೋಡಣೆ ಮತ್ತು ಚನ್ನಕೇಶವ ದೇವಾಲಯದ ಮುಂಭಾಗದಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಪುರಸಭೆಯ ಆದಾಯ ಹೆಚ್ಚಿಸಲು ₹ 49 ಲಕ್ಷ ವೆಚ್ಚದಲ್ಲಿ ಪುರಸಭೆಯ ಹಳೆಯ ಕಟ್ಟಡದ ಹಿಂಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗುವುದು ಎಂದರು.

ಬಯೋ ಮೈಥಲೈಜೇಶನ್‌ ಘಟಕ: ಪಟ್ಟಣದ ಕಸ ನಿರ್ವಹಣೆಗಾಗಿ ಮತ್ತು ಕಸದಿಂದ ಆದಾಯ ಬರುವಂತೆ ಮಾಡುವ ನಿಟ್ಟಿನಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಕಸದಿಂದ ವಿದ್ಯುತ್‌ ಮತ್ತು ಗೊಬ್ಬರ ಉತ್ಪಾದನೆ ಮಾಡುವ ಬಯೋ ಮೈಥಲೈಜೇಶನ್‌ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಪದ್ಮನಾಭ್‌ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು