ಗಾಂಜಾ ಪೆಡ್ಲರ್‌ಗೆ ಪೊಲೀಸರ ಗುಂಡೇಟು

ಆನೇಕಲ್: ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಯ ಕಾಲಿಗೆ ಗುಂಡೇಟು ಹೊಡೆದಿರುವ ಘಟನೆ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿದರಗುಪ್ಪೆ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಆರೋಪಿಯನ್ನು ತಾಲ್ಲೂಕಿನ ಅಡಿಗಾರಕಲ್ಲಹಳ್ಳಿಯ ಅಯೂಬ್ ಖಾನ್ ಅಲಿಯಾಸ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಆರೋಪಿಯು 8 ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅವನಿಂದ 7 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಅತ್ತಿಬೆಲೆ ಸಮೀಪದ ಬಿದರಗುಪ್ಪೆ ಕೆರೆಯ ಬಳಿ ಆರೋಪಿಯು ಗಾಂಜಾ ಸಾಗಿಸುತ್ತಿದ್ದುದ್ದು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲು ಮುಂದಾದಾಗ ಆರೋಪಿಯು ಚಾಕುವಿನಿಂದ ಸರ್ಜಾಪುರ ಪಿಎಸ್‌ಐ ಹರೀಶ್ ರೆಡ್ಡಿ ಅವರ ಬಲಗೈಗೆ ತಿವಿದು ಪರಾರಿಯಾಗಲು ಯತ್ನಿಸಿದ. ತಡೆಯಲು ಯತ್ನಿಸಿದ ಅತ್ತಿಬೆಲೆ ಸಬ್‌ಇನ್‌ಸ್ಪೆಕ್ಟರ್ ಮುರಳಿ ಮತ್ತು ಹೆಡ್‌ಕಾನ್‌ಸ್ಟೇಬಲ್ ರವಿಕುಮಾರ್ ಅವರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಅವರ ಮೇಲೂ ದಾಳಿ ನಡೆಸಲು ಮುಂದಾದಾಗ ಸತೀಶ್ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿಯು ಓಡಿಹೋಗಲು ಯತ್ನಿಸಿದಾಗ ಅಯೂಬ್ ಖಾನ್‌ನ ಕಾಲಿಗೆ ಗುಂಡು ಹೊಡೆದಿದ್ದಾರೆ. ಆರೋಪಿಯು ಗಾಯಗೊಂಡಿದ್ದು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಗೊಂಡಿರುವ ಪಿಎಸ್‌ಐ ಹರೀಶ್‌ರೆಡ್ಡಿ ಮತ್ತು ಹೆಡ್‌ಕಾನ್‌ಸ್ಟೇಬಲ್ ರವಿಕುಮಾರ್ ಅವರು ಆನೇಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಗೆ ಎಸ್ಪಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿ ಮಾಹಿತಿ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.