ಆನೇಕಲ್: ಹಬ್ಬದ ಸಮಯದಲ್ಲಿ ಗಗನಮುಖಿಯಾಗಿ ಸೇವಂತಿ ಬೆಲೆ ಈಗ ಕುಸಿದಿದ್ದು, ತಾಲ್ಲೂಕಿನ ರೈತರು ಹೂ ಕಟಾವು ಮಾಡದೆ ತೋಟಗಳಲ್ಲೇ ಬಿಟ್ಟಿದ್ದಾರೆ. ತೋಟದಲ್ಲೇ ಹೂ ಬಾಡುತ್ತಿದೆ.
ರಾಗಿಯ ಕಣಜ ಆನೇಕಲ್ ತಾಲ್ಲೂಕಿನಲ್ಲಿ ರೈತರು ಕೃಷಿಯ ಜೊತೆಗೆ ತೋಟಗಾರಿಕೆ ಬೆಳೆಗಳಲ್ಲಿಯೂ ಹೆಚ್ಚು ತೊಡಗಿದ್ದಾರೆ. ಹಬ್ಬದ ವೇಳೆ ಬಂಪರ್ ಬೆಲೆ ಪಡೆದಿದ್ದ ಸೇವಂತಿ ಕೆ.ಜಿ 25–30ಕ್ಕೆ ಇಳಿದಿದೆ.
ತಾಲ್ಲೂಕಿನ ಸಬ್‌ಮಂಗಲ, ಗುಡ್ಡನಹಳ್ಳಿ, ರಾಜಾಪುರ, ಕರ್ಪೂರು, ಭಕ್ತಿಪುರ, ಮಾಯಸಂದ್ರ ಹಾಗೂ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಕೊಮಾರನಹಳ್ಳಿ, ಸೆಕೆಂಡ್ ಮದ್ರಾಸ್, ಪೂನಹಳ್ಳಿ ಭಾಗಗಳಲ್ಲಿ ಹೆಚ್ಚು ಸೇವಂತಿ ಬೆಳೆಯಲಾಗುತ್ತದೆ. ಉತ್ತಮ ಫಸಲು ಬಂದರೂ, ಹೂ ಬೇಡಿಕೆ ಕಳೆದುಕೊಂಡಿತು.
ಮಾರುಕಟ್ಟೆಗೆ ಹೂ ತೆಗೆದುಕೊಂಡು ಹೋದರೂ ಬಂಡವಾಳ ಸಿಗುತ್ತಿಲ್ಲ. ಹೀಗಾಗಿ ಹೂ ಕಟಾವು ಕೂಲಿ, ಸಾಗಣೆ ವೆಚ್ಚ ಮಾಡಿ ಕೈ ಸುಟ್ಟುಕೊಳ್ಳುವ ಬದಲು ತೋಟದಲ್ಲೇ ಬಿಟ್ಟರೆ ಗೊಬ್ಬರ ಆಗುತ್ತದೆ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.
ಜನವರಿಯಲ್ಲಿ ಹೂವಿನ ಅಂಟು ನಾಟಿ ಮಾಡಿದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ತೋಟದ ತುಂಬಾ ಹೂ ಫಸಲು ಬಿಡುತ್ತದೆ. ಈ ಹೂವುಗಳಿಗೆ ಗೌರಿ ಗಣೇಶ ಹಬ್ಬ, ವರಲಕ್ಷ್ಮಿ ಹಾಗೂ ಓಣಂ ಹಬ್ಬಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಕೆ.ಜಿ ಹೂವಿಗೆ ₹200-₹300 ಇತ್ತು. ಹಬ್ಬದ ಬಳಿಕ ₹25-30ಕ್ಕೆ ಇಳಿದಿದೆ. ಇದರಿಂದ ರೈತರು ಮಾಡಿದ ಖರ್ಚಿನ ಹಣವು ಸಹ ಬಾರದಂತಾಗಿದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆಯಿದ್ದಾಗ ಬೆಲೆ ಇಲ್ಲ ಎನ್ನುತ್ತಾ ರೈತರು ಪರದಾಡುವಂತಾಗಿದೆ ಎಂದು ಚಿಕ್ಕಹಾಗಡೆಯ ರೈತ ಮನು ತಿಳಿಸಿದರು.
ಉಳುಮೆ, ಗೊಬ್ಬರ, ಡ್ರಿಪ್ಸ್ ಗೊಬ್ಬರ ಸೇರಿದಂತೆ ವಿವಿಧ ಖರ್ಚು ಸೇರಿ ಒಂದು ಎಕರೆ ಸೇವಂತಿ ಬೆಳೆಯಲು ₹1ಲಕ್ಷದವರೆಗೂ ಖರ್ಚು ತಗಲುತ್ತದೆ. ಹೂವು ಕೀಳಲು ಒಬ್ಬರಿಗೆ ₹400 ಜೊತೆ ಊಟ ನೀಡಬೇಕು. 15 ದಿನಗಳಿಗೊಮ್ಮೆ ಔಷಧಿ ಸಿಂಪಡಿಸಬೇಕು. ಇಷ್ಟೆಲ್ಲಾ ಖರ್ಚು ಮಾಡಿ ಲಾಭ ಬಂದಿಲ್ಲ. ಸರ್ಕಾರ ನಮ್ಮತ್ತ ಗಮನ ಹರಿಸಿ ಪರಿಹಾರ ನೀಡಬೇಕು ಎಂದು ರಾಜಾಪುರದ ರೈತ ರುದ್ರಯ್ಯ ಒತ್ತಾಯಿಸಿದ್ದಾರೆ.
ದಸರೆಗೆ ಪುಷ್ಪೋದ್ಯಮ
ದಸರಾ ವೇಳೆ ಆಯುಧ ಪೂಜೆ ಮಾಡಲಾಗುತ್ತದೆ. ಪ್ರತಿ ಮನೆಗಳಲ್ಲಿಯೂ ದಸರಾ ಮತ್ತು ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಹೂವುಗಳೇ ಮುಖ್ಯವಾಗಿರುತ್ತದೆ. ನಿಟ್ಟಿನಲ್ಲಿ ತಾಲ್ಲೂಕಿನ ರೈತರು ಸೇವಂತಿ ಚೆಂಡು ಗುಲಾಬಿ ಹೂವುಗಳ ಬೆಳೆಯತ್ತ ಗಮನ ಹರಿಸಿದ್ದಾರೆ. ಎರಡು ಹಬ್ಬಗಳು ರೈತರಿಗೆ ಹೆಚ್ಚಿನ ಲಾಭ ನೀಡಲಿಲ್ಲ. ರೈತರು ತಾವು ಖರ್ಚು ಮಾಡಿದ ಹಣದ ನಿರೀಕ್ಷೆಯಿಂದಾಗಿ ವಿಜಯದಶಮಿ ದಸರಾದತ್ತ ರೈತರು ಗಮನ ವಹಿಸಿ ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ.
ಕಾಣೆಯಾದ ಡೇರಾ:
ತಾಲ್ಲೂಕಿನ ವಿವಿಧೆಡೆ ಡೇರಾ ಹೂವು ಕಣ್ಮನ ಸೆಳೆಯುತ್ತಿದ್ದವು. ಒಂದು ಡೇರಾ ಹೂವಿಗೆ ಹಬ್ಬದ ಸಂದರ್ಭದಲ್ಲಿ ₹20-₹25ಗೆ ಮಾರಾಟವಾಗುತ್ತಿತ್ತು. ಆಕರ್ಷಕ ಡೇರಾ ಹೂವು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ಸಮಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯುತ್ತಿದ್ದ ಡೇರಾ ಈ ವರ್ಷ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.