ಬುಧವಾರ, ಮಾರ್ಚ್ 3, 2021
28 °C

ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: ಸಕಾಲದಲ್ಲಿ ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಉಗನವಾಡಿ ಗ್ರಾಮಸ್ಥರು ಬಿಎಂಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಎನ್.ಮುನಿರಾಜಪ್ಪ ಮಾತನಾಡಿ, ‘ಬಿಎಂಟಿಸಿ ಬಸ್ ಸಂಖ್ಯೆ 297ಕೆ, ವಿಶ್ವನಾಥಪುರದಿಂದ ಕೆ.ಆರ್.ಮಾರ್ಕೆಟ್ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈ ಮಾರ್ಗದಲ್ಲಿ ಬರುವ ಸಾದಹಳ್ಳಿ, ಕೆಂಪತಿಮ್ಮನಹಳ್ಳಿ, ಪೂಜನಹಳ್ಳಿ, ಇಲತೊರೆ, ಜೋಗನಹಳ್ಳಿ, ಕನ್ನಮಂಗಲ, ಕನ್ನಮಂಗಲಪಾಳ್ಯ, ಅರಸನಹಳ್ಳಿ, ದೇವಗಾನಹಳ್ಳಿ, ಸೋಲೂರು, ಚಿಕ್ಕಚಿಮನಹಳ್ಳಿ, ಬೋಮ್ಮವಾರ ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಿತ್ತು. ಇದನ್ನು ಏಕಾಏಕಿ ಜನರಲ್ ಶಿಪ್ಟ್‌ಗೆ ಬದಲಿಸಿರುವುದರಿಂದ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಿದೆ’ ಎಂದು ದೂರಿದರು.

‘ಈ ಹಿಂದಿನ ಬಸ್ ಸಂಚಾರದ ವೇಳಾ ಪಟ್ಟಿಯನ್ನು ಮುಂದುವರೆಸಿ ಚಪ್ಪರದಕಲ್ಲು ಬಳಿ ಇರುವ ಜಿಲ್ಲಾಡಳಿತ ಭವನದವರೆಗೆ ಸಂಚಾರ ವ್ಯವಸ್ಥೆ ಮಾಡಬೇಕು. ಸಂಸದ ಮತ್ತು ಶಾಸಕರ ಶಿಫಾರಸು ಪತ್ರವನ್ನು ಬಿ‌ಎಂಟಿಸಿ ವ್ಯವಸ್ಥಾಪಕರಿಗೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಂ.ನಾರಾಯಣಸ್ವಾಮಿ ಹಾಗೂ ಮುಖಂಡರಾದ ಗಣೇಶ, ಮಾರುತಿ, ನಾರಾಯಣ್ ಮಾತನಾಡಿ, ‘ಹತ್ತಾರು ಗ್ರಾಮಗಳಲ್ಲಿನ ಶಾಲಾ – ಕಾಲೇಜು ವಿದ್ಯಾರ್ಥಿಗಳು, ಕೂಲಿಕಾರ್ಮಿಕರಿಗೆ ಸಕಾಲದಲ್ಲಿ ಬಸ್ ಸಂಚಾರ ವ್ಯವಸ್ಥೆ ಇಲ್ಲ. ದೇವನಹಳ್ಳಿ ತಾಲ್ಲೂಕು ಕೇಂದ್ರಕ್ಕೂ ಬಸ್ ವ್ಯವಸ್ಥೆ ಇಲ್ಲವಾಗಿದೆ. ಸಾದಹಳ್ಳಿ ಮಾರ್ಗವಾಗಿ ಉಗನವಾಡಿಗೆ ಬಂದು ದೇವನಹಳ್ಳಿಗೆ ಹೋಗಿ ಬರಲು ಎರಡು ಬಸ್‌ಗಳ ವ್ಯವಸ್ಥೆಯಾಗಬೇಕು. ಉಗನವಾಡಿ ಕ್ರಾಸಿನವರೆಗೆ ಬರುವ 297ಜಿ ಮತ್ತು 298 ಎಂ ಬಸ್‌ಗಳು ಉಗನವಾಡಿ ಗ್ರಾಮದೊಳಗೆ ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಮುಖಂಡರಾದ ಮುನಿನಾರಾಯಣಪ್ಪ, ಎನ್.ನಾರಾಯಣಸ್ವಾಮಿ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು