ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಆರೋಗ್ಯ ಸಚಿವ ಸುಧಾಕರ್‌ ಭರವಸೆ

Last Updated 26 ಜೂನ್ 2022, 7:26 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಮೂರು ವರ್ಷಗಳಲ್ಲಿ ವ್ಯಾಪಕವಾಗಿ ಚರ್ಚಿಸಿದ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ನಗರದಲ್ಲಿ ಬಿಜೆಪಿ ಜಿಲ್ಲಾ ಫಲಾನು ಭವಿಗಳ ಪ್ರಕೋಷ್ಠ ಹಾಗೂ ಅಂಜನಾದ್ರಿ ಟ್ರಸ್ಟ್‌ ಸಹಯೋಗದೊಂದಿಗೆ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಯಾವುದೇ ಸಂದರ್ಭದಲ್ಲೂ ಪದವಿ ಹಂತದಲ್ಲಿ ತಮ್ಮ ಆಸಕ್ತಿಯ ವಿಷಯಗಳನ್ನು ಬದಲಾವಣೆ ಮಾಡಿಕೊಳ್ಳುವ ಅವಕಾಶಗಳಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮುದಾಯ ಅಂತರರಾಷ್ಟ್ರೀಯ ಗುಣಮಟ್ಟದ ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮುನ್ನ ಅವರೊಂದಿಗೆ ಸಂವಾದ ನಡೆಸುವ ಮೂಲಕ ಪ್ರತಿವರ್ಷವೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರವು ಬೆಂಗಳೂರಿನ ಉಪ ನಗರವಾಗಿ ಬೆಳೆಯುವ ಲಕ್ಷಣಗಳನ್ನು ಹೊಂದಿದೆ ಎಂದರು.

ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಮಾತನಾಡಿ, ದೇಶದ ಭದ್ರತೆ ಹಾಗೂ ಅಂತರರಾಷ್ಟ್ರೀಯ ರಕ್ಷಣಾ ಗುಣಮಟ್ಟಕ್ಕೆ ಅನುಗುಣವಾಗಿ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸುವ ಸಲುವಾಗಿ ಹಲವಾರು ದೇಶಗಳಲ್ಲಿ ಅಧ್ಯಯನ ನಡೆಸಿದ ನಂತರವೇ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡರು ವಿನಾಕಾರಣ ಗೊಂದಲ ಸೃಷ್ಟಿಸುವ ಮೂಲಕ ಯುವ ಸಮುದಾಯವನ್ನು ಪ್ರತಿಭಟನೆಗೆ ಇಳಿಸುತ್ತಿದೆ. ಮೋದಿ ಅವರು ಭಾರತದ ಕೀರ್ತಿ ವಿದೇಶಗಳಲ್ಲೂ ಬೆಳಗುವಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್‌. ಅಶೋಕ ಮಾತನಾಡಿ, ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೋಷಕರು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಿಜೆಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಧೀರಜ್‌ ಮುನಿರಾಜು ಆಯೋಜಿಸಿದ್ದರು. ಸಮಾರಂಭದಲ್ಲಿ ಶಾಸಕಿ ಅನ್ನಪೂರ್ಣ ಶ್ರೀನಿವಾಸ್‌, ನಗರಸಭೆ ಅಧ್ಯಕ್ಷೆ ಎಸ್‌. ಸುಧಾರಾಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎ. ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜ್‌, ಮುಖಂಡರಾದ ಕೆ.ಎಂ. ಹನುಮಂತರಾಯಪ್ಪ, ಬಿ.ಸಿ. ನಾರಾಯಣಸ್ವಾಮಿ, ಪುಷ್ಪಾ ಶಿವಶಂಕರ್‌, ಎಂ.ಕೆ. ವತ್ಸಲಾ, ಕೆ.ಬಿ. ಮುದ್ದಪ್ಪ, ನಾಗೇಶ್‌, ರಾಮಕಿಟ್ಟಿ, ರಾಜಘಟ್ಟ ಕಾಂತರಾಜ್‌, ಕೆ.ಎಚ್‌. ವೆಂಕಟರಾಜು, ಕೋಡಿನರಸಿಂಹಮೂರ್ತಿ, ಜೋ.ನ. ಮಲ್ಲಿಕಾರ್ಜುನ್‌, ನಗರಸಭೆ ಸದಸ್ಯ ಬಂತಿವೆಂಕಟೇಶ್‌, ಲಕ್ಷ್ಮಿಪತಿ, ಪದ್ಮನಾಭ್‌, ಅಂಜನಾದ್ರಿ ಟ್ರಸ್ಟ್‌ನ ಮುನಿರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT